ಕಾಸರಗೋಡು: ತನ್ನ ಪತ್ನಿಗೆ ಮೊಬೈಲ್ ಸಂದೇಶದ ಮೂಲಕ ಮುತ್ತಲಾಕ್‍ನೊಂದಿಗೆ ವಿಚ್ಛೇದನ ನೀಡಿದ ನೆಲ್ಲಿಕಟ್ಟೆ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಜಾಕ್‍ನನ್ನು ವಿದೇಶದಿಂದ ಕರೆತರಲು ಪೊಲೀಸರು ಕ್ರಮ ಅರಂಭಿಸಿದ್ದಾರೆ. ಇದಕ್ಕಾಗಿ ಪೊಲೀಸರು ಇಂಟರ್‍ಪೋಲ್ ನೆರವು ಯಾಚಿಸಿದ್ದು, ಶೀಘ್ರ ಬಂಧಿಸಿ ಕರೆತರಲಾಗುವುದಾಗಿ ಪೊಲೀಸರು ತಿಳಿಸಿದ್ದರೆ.
ವಿದೇಶದಲ್ಲಿ ಕೆಲಸದಲ್ಲಿರುವ ಪತಿ ಅಬ್ದುಲ್ ರಜಾಕ್ ಫೆ. 21ರಂದು ನನ್ನ ತಂದೆ ಮೊಬೈಲ್‍ಗೆ ಕರೆಮಾಡಿ, ಮುತ್ತಲಾಕ್‍ನೊಂದಿಗೆ ವಿಚ್ಛೇದನ ನೀಡುವ ಸಂದೇಶ ಕಳುಹಿಸಿಕೊಟ್ಟಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಪತಿ ಸೇರಿದಂತೆ ನಾಲ್ವರ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಪತಿಯ ತಾಯಿ ಹಾಗೂ ಆತನ ಇಬ್ಬರು ಸಹೋದರಿಯರು ಸೇರಿ ತನಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದು, ಆಹಾರವನ್ನು ನೀಡದೆ, ಕೊಠಡಿಯಲ್ಲಿ ಕೂಡಿಹಾಕಿ ದೌರ್ಜನ್ಯವೆಸಗುತ್ತಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ಈ ಯಾತನೆ ಅನುಭವಿಸುತ್ತಿದ್ದೇನೆ. ಈ ಬಗ್ಗೆ ಪತಿಗೆ ಮಾಹಿತಿ ನೀಡಿದ್ದು, ನಂತರವೂ ಪತಿ ತನ್ನೊಂದಿಗೆ ಅನ್ಯೋನ್ಯವಾಗಿದ್ದರು. ನಂತರ ಎಕಾಏಕಿ ಮುತ್ತಲಾಕ್ ಮೂಲಕ ವಿಚ್ಛೇದನ ಕೋರಿ ಸಂದೇಶ ರವಾನಿಸಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಳು.






