ನವದೆಹಲಿ: 'ನವದೆಹಲಿ ರೈಲು ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತ ವೇಳೆ, ರೈಲು ಕೂಲಿ ಕಾರ್ಮಿಕರು ತಮ್ಮ ಜೀವ ಪಣಕ್ಕಿಟ್ಟು ಜನರ ರಕ್ಷಣೆಗೆ ಮುಂದಾದರು. ಆದರೆ, ಅವರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ನವದೆಹಲಿ ರೈಲು ನಿಲ್ದಾಣದಲ್ಲಿ ರೈಲು ಕೂಲಿ ಕಾರ್ಮಿಕರೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ರಾಹುಲ್ ಗಾಂಧಿ ಅವರು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ನಿರ್ವಹಣೆಯನ್ನು ಸುಧಾರಿಸುವ ಹಾಗೂ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಸಲಹೆಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡಿರುವ ಅವರು, ಕಾಲ್ತುಳಿತದಂತಹ ಅವಘಡಗಳನ್ನು ತಡೆಗಟ್ಟಲು ಸಾಮೂಹಿಕವಾಗಿ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.
ಸಂವಾದದ ವೇಳೆ, 'ಡಿ' ಗ್ರೂಪ್ ನೌಕರಿ ನೀಡುವಂತೆ ರೈಲು ಕೂಲಿ ಕಾರ್ಮಿಕರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿರುವುದು ವಿಡಿಯೊದಲ್ಲಿದೆ.




