ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೆಲಸಿ, ನಕಲಿ ಹೆಸರಿಟ್ಟುಕೊಂಡು ಮನೆಗೆಲಸ ವೃತ್ತಿ ಮಾಡುತ್ತಿದ್ದ 23 ವರ್ಷದ ನಕ್ಸಲ್ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ಮಹಿಳೆ ಮೂಲತಃ ಜಾರ್ಖಂಡ್‌ನ ಕುದಾಬೂರು ಗ್ರಾಮದವರು. ಹಲವು ಎನ್‌ಕೌಂಟರ್ ಪ್ರಕರಣಗಳಲ್ಲಿ ಈಕೆ ಪೊಲೀಸರಿಗೆ ಬೇಕಾಗಿದ್ದರು.
ಐಪಿಸಿಯ ವಿವಿಧ ಸೆಕ್ಷನ್, ಸಶಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆಗಳಡಿ ಈಕೆ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಅವರು ತಿಳಿಸಿದರು.
ಜಾರ್ಖಂಡ್‌ನ ನ್ಯಾಯಾಲಯವೊಂದು 2023 ಮಾರ್ಚ್ 26ರಂದು ಇವರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿತ್ತು.
'ಗುಪ್ತಚರ ಮಾಹಿತಿ ಆಧರಿಸಿ ಮಾ.4ರಂದು ನಕ್ಸಲ್ ಮಹಿಳೆಯನ್ನು ಬಂಧಿಸಲಾಯಿತು' ಎಂದು ಎನ್‌ಸಿಆರ್ ಉಪ ಪೊಲೀಸ್ ಆಯುಕ್ತ ವಿಕ್ರಂ ಸಿಂಗ್ ತಿಳಿಸಿದರು.
ರೈತ ಕುಟುಂಬದಲ್ಲಿ ಜನಿಸಿದ್ದ ಮಹಿಳೆ, 10ನೇ ವಯಸ್ಸಿನಲ್ಲಿಯೇ ಸಿಪಿಐ ನಕ್ಸಲ್ ಸಂಘಟನೆ ಸೇರಿದ್ದರು. ಐದು ವರ್ಷ ಇವರಿಗೆ ತರಬೇತಿ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.




