ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳು ಯೋಜನೆಗಳನ್ನು ತಯಾರಿಸುವಾಗ ಕೌಶಲ್ಯ ಅಭಿವೃದ್ಧಿಗೆ ಪ್ರತ್ಯೇಕ ಪರಿಗಣನೆಯನ್ನು ನೀಡಬೇಕೆಂದೂ, ಜಿಲ್ಲಾ ಪಂಚಾಯಿತಿ ಜತೆ ಸೇರಿ ಸಂಯುಕ್ತ ಯೋಜನೆಗಳನ್ನು ತಯಾರಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಹೇಳಿದರು. ಅವರು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಕೀಯ ಯೋಜನೆಗಳು ಹಾಗೂ ನವಕೇರಳ ಮಿಷನ್ ನಂತೆ ರಾಜ್ಯ ಸರ್ಕಾರ ಜವಾಬ್ದಾರಿ ವಹಿಸಿ ನಡೆಸಿಕೊಂಡು ಬರುವ ಚಟುವಟಿಕೆಗಳಲ್ಲಿ ಒಂದಾಗಿದೆ. ಕೇರಳ ನೊಲೆಜ್ ಎಕನಾಮಿಕ್ ಮಿಷನ್ ಅಂಗವಾಗಿ ವಿದ್ಯಾವಂತ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಳ್ಳುವ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಬಹುದು ಎಂದು ತಿಳಿಸಿದರು. ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಗ್ರಾಮ ಪಂಚಾಯಿತಿ 10 ಲಕ್ಷ ರೂ. ಮತ್ತು ಬ್ಲಾಕ್ ಪಂಚಾಯತ್ 20 ಲಕ್ಷ ರೂ.ಗಳನ್ನು ಮೀಸಲಿಡಲು ನಿರ್ದೇಶಿಸಲಾಗಿದೆ. ಜಿಲ್ಲಾ ಪಂಚಾಯತ್ ಈ ಕಾರ್ಯಕ್ಕಾಗಿ 90 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದು, ತ್ರಿಸ್ತರ ಪಂಚಾಯಿತಿಗಳು ಒಟ್ಟಾಗಿ ಯೋಜನೆ ತಯರಿಸಲಿರುವುದಾಗಿ ತಿಳಿಸಿದರು.
ಮಾಜಿ ಸಚಿವರಿಂದ ಉದ್ಘಾಟನೆ:
ನಾಲೆಜ್ ಎಕನಾಮಿಕ್ ಮಿಷನ್‍ನ ನೇತೃತ್ವ ವಹಿಸುವ ಮಾಜಿ ಹಣಕಾಸು ಸಚಿವ ಟಿ ಎಂ ಥಾಮಸ್ ಐಸಾಕ್ ಮಾರ್ಚ್ 12 ರಂದು ಕಾಸರಗೋಡು ಜಿಲ್ಲೆಗೆ ಆಗಮಿಸಲಿದ್ದು, ಈ ಸಂದರ್ಭ ಸ್ಥಳೀಯಾಡಳಿತ ಸಂಸ್ಥೆಗಳ ಜನ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಾಗಿ ಒಂದು, ಸೆಮಿನಾರ್ ನಗರದ ಸಿಟಿ ಟವರ್ ನಲ್ಲಿ ನಡೆಯಲಿದೆ. ನಾಲೆಜ್ ಎಕನಾಮಿಕ್ ಮಿಷನ್‍ನ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.




