ಕಾಸರಗೋಡು : ಭಾಷಾಂತರ ಎಂಬುದು ಅನುವಾದ ಮಾತ್ರವಲ್ಲ, ಇದು ಎರಡು ಸಂಸ್ಕ್ರತಿಗಳ ಪರಸ್ಪರ ವಿನಿಮಯವಾಗಿದೆ ಎಂಬುದಾಗಿ ಕನ್ನಡದ ಖ್ಯಾತ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ತಿಳಿಸಿದ್ದಾರೆ. ಅವರು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಕನ್ನಡ-ಮಲಯಾಳ ಭಾಷಾಂತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾಷಾಂತರ ಎಂಬುದು ಭಾವನೆ, ಆಲೋಚನೆ, ಚಿಂತನೆ ಬೆಸೆಯುವ ಹಾಗೂ ಸಂಬಂಧ ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಕಾಸರಗೋಡಿನಲ್ಲಿ ಕನ್ನಡ ಹಾಗೂ ಮಲಯಾಳ ಭಾಷೆಗಳ ನಡುವಿನ ಅನುವಾದವು ಎರಡೂ ಭಾಷೆಗಳ ನಡುವಿನ ಸಂಸ್ಕ್ರತಿಯ ವಿನಿಮಯವಾಗಿದೆ. ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ, ಸಿ. ರಾಘವನ್, ಟಿ. ಉಬೈದ್, ವೇಣುಗೋಪಾಲ್ ಕಾಸರಗೋಡು ಮೊದಲಾದವರು ಅಗ್ರಗಣ್ಯ ಅನುವಾದಕರಾಗಿದ್ದರು. ಅನುವಾದ ಲೋಕಕ್ಕೆ ಇವರ ಮಹತ್ತರ ಕೊಡುಗೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವುದಾಗಿ ತಿಳಿಸಿದರು.
ದ್ರಾವಿಡ ಭಾಷಾ ಅನುವಾದಕರ ಸಂಘ(ಡಿಬಿಟಿಎ) ಹಾಗೂ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸಮಿತಿ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. ಡಿಬಿಟಿಎ ಅಧ್ಯಕ್ಷೆ ಡಾ. ಎಸ್.ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರದ್ಯಾಪಕ ಡಾ. ರತ್ನಾಕರ ಮಲ್ಲಮೂಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಲಯಾಳಕ್ಕೆ ಭಾಷಂತರಗೊಳಿಸುವ ಕೆಲಸ ನಡೆದುಬರಬೇಕಾಗಿದೆ. ಇದಕ್ಕೆ ಡಿಬಿಟಿಎ ಪ್ರೋತ್ಸಾಹ ಅಗತ್ಯ. ಅನುವಾದ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕøತ ಕೆ.ವಿ ಕುಮಾರನ್ ಮಾಸ್ಟರ್, ಬಿ.ಟಿ.ಎ. ಉಪಾಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ಕಾರ್ಯಕ್ರಮದ ಸಂಯೋಜಕ ರವೀಂದ್ರನ್ ಪಾಡಿ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಉಪಸ್ಥಿತರಿದ್ದರು. ನುಳ್ಳಿಪ್ಪಡಿ ಕನ್ನಡ ಭವನ ಸಂಚಾಲಕ ವಾಮನ ರಾವ್ ಬೇಕಲ್ ಪ್ರಾಸ್ತಾವಿಕ ಮಾತುಗಳನ್ನಡಿ ಸ್ವಾಗತಿಸಿದರು. ರಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಗಾರದಲ್ಲಿ 40ಕ್ಕೂ ಹೆಚ್ಚುಮಂದಿ ಮಂದಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಕೆ.ವಿ ಕುಮಾರನ್ ಮಾಸ್ಟರ್, ಡಾ. ಬಿ.ಎಸ್ ಶಿವಕುಮಾರ್ ತರಗತಿ ನಡೆಸಿದರು. ಈ ಸಂದರ್ಭ ಕನ್ನಡದಿಂದ ಮಲಯಾಳಕ್ಕೆ ಹಾಗೂ ಮಲಯಾಳದಿಂದ ಕನ್ನಡಕ್ಕೆ ಭಾಷಾಂತರಿಸುವ ಬಗ್ಗೆ ಕಾರ್ಯಾಗಾರ ನಡೆಯಿತು. ಡಾ. ಎಸ್.ಸುಷ್ಮಾ ಶಂಕರ್ ಮೋಡರೇಟರ್ ಆಗಿ ಸಹಕರಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.





