ಕುಂಬಳೆ: ಜಿಲ್ಲೆಯ ಪ್ರಧಾನವಾದ ವಾಣಿಜ್ಯ ಬೆಳೆಯಾದ ಅಡಿಕೆ ಕೃಷಿ ವ್ಯಾಪಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.ಇದಕ್ಕೆ ವರ್ತಮಾನದ ವ್ಯವಸ್ಥೆಗಳಿಗೆ ಅನುಗುಣವಾಗಿ ಪರಿಹಾರ ಕಲ್ಪಿಸಬೇಕೆಂದು ಕಿಸಾನ್ ಸೇನೆಯ ಜಿಲ್ಲಾ ಪದಾಧಿಕಾರಿಗಳು ಬುಧವಾರ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸಾವಿರಕ್ಕಿಂತಲೂ ಹೆಚ್ಚು ಕೃಷಿಕ ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿ ತಮ್ಮ ನಿತ್ಯ ಜೀವನ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಮಾತ್ರವಾಗಿ 19.500 (ಹತ್ತೊಂಭತ್ತು ಸಾವಿರದ ಐನೂರು) ಹೆಕ್ಟರ್ ಭೂಮಿಯಲ್ಲಿ ಅಡಿಕೆ ಕೃಷಿ ಬೆಳೆಸಲಾಗುತ್ತಿದೆ. ಇದರಲ್ಲಿ ಎರಡು ಲಕ್ಷ ಕ್ವಿಂಟಾಲಿಗೂ ಮಿಕ್ಕಿ ಅಡಿಕೆಯನ್ನು ಉತ್ಪಾದಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಿಂದ ಹಲವು ರೋಗಗಳಿಂದಾಗಿ ಅಡಿಕೆ ಉತ್ಪಾದನೆಯು ಕುಸಿದು ಪಾತಾಳಕ್ಕೆ ಇಳಿದಿದೆ. ಹಳದಿ ರೋಗ, ಎಲೆಚುಕ್ಕಿ ರೋಗ, ಹಿಂಗಾರ ಕಪ್ಪಾಗುವ ರೋಗ, ಮಹಾಳಿ ರೋಗ ಮುಂತಾದ ರೋಗಗಳಿಂದಾಗಿ ಅಡಿಕೆ ಮರಗಳು ಸಾಲು ಸಾಲಾಗಿ ನೆಲಕಚ್ಚಿವೆ. ಎಲೆಚುಕ್ಕಿ ರೋಗ ಅತಿ ವೇಗದಲ್ಲಿ ಹರಡುವ ರೋಗವಾದುದರಿಂದ ಎಲ್ಲಾ ಅಡಿಕೆ ಮರಗಳಿರುವ ಪ್ರದೇಶಗಳಲ್ಲಿ ಹರಡಿ ಅಡಿಕೆ ಉತ್ಪಾದನೆಯು ಶೇಕಡಾ 80 ರಷ್ಟು ಕುಸಿದಿದೆ. ವನ್ಯಜೀವಿಗಳ ಹಾವಳಿಯಿಂದ ಕಂಗೆಟ್ಟ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವನ್ಯ ಜೀವಿಗಳ ಹಾವಳಿಯಿಂದ ಕೃಷಿ ನಾಶವುಂಟಾದ ಕೃಷಿಕರಿಗೆ ಸರ್ಕಾರದಿಂದ ಯಾವುದೇ ರೀತಿಯ ನಷ್ಟಪರಿಹಾರವು ಲಭ್ಯವಾಗುವುದಿಲ್ಲ. ಆದುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಪರಿಗಣಿಸಿ ಇದಕ್ಕೆ ರಾಜ್ಯ ಸರ್ಕಾರದಿಂದ ಅಡಿಕೆ ಕೃಷಿಕರಿಗೆ ಬೇಕಾದ ಸೂಕ್ತ ಪರಿಹಾರ ಒದಗಿಸಿಕೊಡ ಬೇಕೆಂದೂ, ಕಾಸರಗೋಡು ಜಿಲ್ಲೆಯ ಕೃಷಿ ವಲಯವನ್ನು ದುರಂತ ಬಾಧಿತ ಪ್ರದೇಶವಾಗಿ ಘೋಷಿಸಬೇಕೆಂದೂ ಕಿಸಾನ್ ಸೇನೆ ಒತ್ತಾಯಿಸಿದೆ.
ಕೃಷಿ ಭವನದ ವ್ಯಾಪ್ತಿಯಲ್ಲಿರುವ ಎಲ್ಲಾ ಕೃಷಿಕರಿಗೂ ಭೂಮಿಯ ವಿಸ್ತೀರ್ಣ ಪರಿಗಣಿಸದೆ ಡ್ರೋನ್ ಮೂಲಕ ಅಥವಾ ಕಾರ್ಮಿಕರ ಮೂಲಕ ಉಚಿತವಾಗಿ ಔಷಧಿ ಸಿಂಪಡಿಸುವ ವ್ಯವಸ್ಥೆಯನ್ನು ಮಾಡಬೇಕು, ಕೃಷಿ ಸಾಲಗಳ ಅವಧಿಯನ್ನು ಬಡ್ಡಿ ರಹಿತ 3 ವರ್ಷವಾದರೂ ಮುಂದುವರಿಸಬೇಕು, ಆಸ್ತಿಯನ್ನು ಏಲಂ, ಜಪ್ತಿ ಮುಂತಾದವುಗಳಿಂದ ತಡೆಯಬೇಕು. ಕೃಷಿ ಸಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಬಡ್ಡಿಯನ್ನು ಮನ್ನಾ ಮಾಡಬೇಕು, ಎಲೆ ಚುಕ್ಕಿ ರೋಗ ಫಸಲ್ ಭೀಮಾ ಪಿ.ಎಂ.ಎಫ್.ವೈ.)ಯೋಜನೆಯಡಿಲ್ಲಿ ಸೇರಿಸಿ ವಿಮಾ ಯೋಜನೆ ಜಾರಿಗೊಳಿಸಬೇಕು. ವನ್ಯ ಜೀವಿಗಳಿಂದುಂಟಾದ ಕೃಷಿ ನಾಶಕ್ಕೆ ಸರಿಯಾದ ಪರಿಹಾರ ಒದಗಿಸಬೇಕು, ವನ್ಯಮೃಗಗಳ ಹಾವಳಿಯುಂಟಾಗದಂತೆ ತಡೆಯಲು ವಿದ್ಯುತ್ ಬೇಲಿ ಅಥವಾ ಟ್ರಂಚ್‍ಗಳನ್ನು ತಯಾರಿಸಿ ಶಾಶ್ವತ ಪರಿಹಾರ ನೀಡಬೇಕು, ನೀರಾವರಿಗೆ ಉಪಯೋಗಿಸುವ ವಿದ್ಯುತ್ ಪಂಪ್ ಗಳಿಗೆ ಎಲ್ಲಾ ಕೃಷಿಕರಿಗೂ ಅನ್ವಯಿಸುವಂತೆ ಉಚಿತ ವಿದ್ಯುತ್ ಒದಗಿಸಬೇಕು, ಔಷಧಿ ಸಿಂಪಡಿಸಲು ಸೂಕ್ತ ಸಮಯದಲ್ಲಿ ಕಾರ್ಮಿಕರು ಲಭಿಸದ ಕಾರಣ ಕೃಷಿಕರಿಗೆ ಔಷಧಿ ಸರಿಯಾದ ರೀತಿಯಲ್ಲಿ ಸಿಂಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಡ್ರೋನ್ ಉಪಯೋಗಿ ಮದ್ದು, ಮೈಕ್ರೋ ನ್ಯೂಟ್ರಿಷನ್ ಮುಂತಾದವುಗಳನ್ನು ಸಿಂಪಡಿಸಲು ಅನುಮತಿ ಕೊಡಬೇಕು ಎಂದು ಕಿಸಾನ್ ಸಭೆ ಒತ್ತಾಯಿಸಿದೆ. ಎಲ್ಲಾ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಜಿಲ್ಲಾಧಿಕಾರಿಗಳು ಸರ್ಕಾರದಿಂದ ಕೃಷಿಕರಿಗೆ ಬೇಕಾದ ಪರಿಹಾರಗಳನ್ನು ಒದಗಿಸಿ ಕೊಡದಿದ್ದಲ್ಲಿ ಕೃಷಿಕರೆಲ್ಲರನ್ನೂ ಒಂದಾಗಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಪದಾಧಿಕಾರಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ, ಜೊತೆ ಕಾರ್ಯದರ್ಶಿ ಸಚಿನ್ ಕುಮಾರ್ ಎಂ. ಉಪಸ್ಥಿತರಿದ್ದು ಮಾಹಿತಿ ನೀಡಿದರು.




.jpg)

