ನವದೆಹಲಿ: ವಿಶ್ವ ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ವಿಜ್ಞಾನ, ಚೆಸ್, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಸಾಧಕಿಯರು ನಿರ್ವಹಣೆ ಮಾಡಿದರು.
ಇವರು ತಾವು ಸಾಗಿಬಂದ ಅಸಾಧಾರಣ ಹಾದಿ, ಎದುರಾದ ಅಡೆತಡೆಗಳು ಮತ್ತು ತಮ್ಮ ಸಾಧನೆ ಕುರಿತ ಸ್ಫೂರ್ತಿದಾಯಕ ಅನುಭವಗಳನ್ನು ಹಂಚಿಕೊಂಡರು.
ಈ ಮೂಲಕ ಭಾರತದ ಭವಿಷ್ಯವನ್ನು ರೂಪಿಸುವ 'ನಾರಿಶಕ್ತಿ'ಯನ್ನು ಅನಾವರಣಗೊಳಿಸಿದರು.
ಈ ಹಿಂದೆ 2020ರಲ್ಲಿ ಸಹ ವಿಶ್ವ ಮಹಿಳಾ ದಿನದಂದು ಪ್ರಧಾನಿ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ವಿವಿಧ ಸಾಧಕಿಯರು ನಿರ್ವಹಿಸಿದ್ದರು.
ನಿರ್ವಹಿಸಿದ ಸಾಧಕಿಯರು ಯಾರು?
*ವೈಶಾಲಿ ರಮೇಶ್‌ಬಾಬು: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹಮ್ಮೆ ತಂದ ತಮಿಳುನಾಡಿನ ಚೆಸ್ ಗ್ರಾಂಡ್ ಮಾಸ್ಟರ್
'ಕನಸನ್ನು ಹಿಂಬಾಲಿಸಿ, ಅಡೆತಡೆಗಳಿಗೆ ಹೆದರದಿರಿ. ನಿಮ್ಮ ಉತ್ಸಾಹವೇ ನಿಮ್ಮ ಶಕ್ತಿ'
*ಅನಿತಾ ದೇವಿ: ಸುಸ್ಥಿರ ಕೃಷಿ ಮೂಲಕ ನೂರಾರು ಮಹಿಳೆಯರನ್ನು ಸಬಲೀಕರಣಗೊಳಿಸಿರುವ ಇವರು 'ಬಿಹಾರದ ಅಣಬೆ ಮಹಿಳೆ' ಎಂದೇ ಹೆಸರಾಗಿದ್ದಾರೆ
'ನನ್ನೊಂದಿಗೆ ಕೆಲಸ ಮಾಡಿದ ಮಹಿಳೆಯರು ಹಣವನ್ನಷ್ಟೇ ಸಂಪಾದನೆ ಮಾಡುತ್ತಿಲ್ಲ; ಆತ್ಮವಿಶ್ವಾಸ, ಆತ್ಮಗೌರವವನ್ನೂ ಗಳಿಸಿದ್ದಾರೆ. ಆರ್ಥಿಕ ಸ್ವಾತಂತ್ರ್ಯವು ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಉತ್ತಮಪಡಿಸುತ್ತದೆ'
*ಎಲಿನಾ ಮಿಶ್ರಾ: ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಪರಮಾಣು ವಿಜ್ಞಾನಿ. ಪ್ರೊಟಾನ್ ಆಯಕ್ಸಿಲರೇಟರ್ ತಂತ್ರಜ್ಞಾನ ಮತ್ತು ಸಂಪರ್ಕ ಸಾಧ್ಯವಿರದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸುವ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ
*ಶಿಲ್ಪಿ ಸೋನಿ: ಬಾಹ್ಯಾಕಾಶ ವಿಜ್ಞಾನಿ. ಇಸ್ರೊದಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು 35 ಸಂವಹನ ಮತ್ತು ಪಥದರ್ಶಕ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ
*ಅಜೈತಾ ಶಾ: 'ಫ್ರಾಂಟಿಯರ್ ಮಾರ್ಕೆಟ್ಸ್' ಸಂಸ್ಥಾಪಕಿ ಮತ್ತು ಸಿಇಒ. ಸಾವಿರಾರು ಮಹಿಳೆಯರನ್ನು ಗ್ರಾಮೀಣ ಭಾಗದ ಉದ್ಯಮಿಗಳಾಗಿ ಪರಿವರ್ತನೆ ಮಾಡಿದ್ದಾರೆ
'ಆರ್ಥಿಕವಾಗಿ ಸಬಲೀಕರಣಗೊಂಡ ಮಹಿಳೆ ಉತ್ತಮ ನಿರ್ಧಾರ ಕೈಗೊಳ್ಳುತ್ತಾಳೆ, ಸ್ವತಂತ್ರ ಚಿಂತಕಿಯಾಗಿರುತ್ತಾಳೆ, ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾಳೆ ಮತ್ತು ಆಧುನಿಕ ಭಾರತದ ನಿರ್ಮಾತೃವಾಗುತ್ತಾಳೆ!'
*ಡಾ.ಅಂಜಲಿ ಅಗರ್ವಾಲ್: ವಕೀಲೆಯಾಗಿರುವ ಇವರು, ಭಾರತದಲ್ಲಿ ಮೂಲಸೌಕರ್ಯಕ್ಕಾಗಿ ಮೂರು ದಶಕಗಳ ಕೆಲಸ ಮಾಡಿದ್ದಾರೆ.
'ಪ್ರತಿಯೊಬ್ಬ ಮಹಿಳೆ, ಪ್ರತಿಯೊಬ್ಬ ವ್ಯಕ್ತಿಯು ಸ್ವಾತಂತ್ರ್ಯ ಮತ್ತು ಘನತೆಯಿಂದ ಜೀವಿಸಬಹುದು ಎಂದು ಜಗತ್ತಿಗೆ ಸಾರೋಣ'
ಎಲಿನಾ ಮಿಶ್ರಾ

ಶಿಲ್ಪಿ ಸೋನಿ
ವೈಶಾಲಿ
ಅಂಜಲಿ ಅಗರ್ವಾಲ್
ಅನಿತಾ ದೇವಿ

ಅಜೈತಾ ಶಾ
ವಂದೇ ಭಾರತ್ ರೈಲಿನ ಮಹಿಳಾ ಸಿಬ್ಬಂದಿ ನರೇಂದ್ರ ಮೋದಿ ಪ್ರಧಾನಿದೇಶದ ನಾರಿಶಕ್ತಿಗೆ ನಮಸ್ಕರಿಸುತ್ತೇನೆ. ನಮ್ಮ ಸರ್ಕಾರವು ಯಾವಾಗಲೂ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಿದ್ದು ಅದು ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಪ್ರತಿಫಲಿಸುತ್ತಿದೆ
ಮಹಿಳೆಯರ ಸುರಕ್ಷತೆಗೆ ಸರ್ಕಾರದ ಆದ್ಯತೆ: ಮೋದಿ
ನವಸಾರಿ: ನಮ್ಮ ಸರ್ಕಾರವು ಮಹಿಳೆಯ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಗಾಗಿ ಮರಣ ದಂಡನೆ ಸೇರಿದಂತೆ ಹಲವು ಕಠಿಣ ಕಾನೂನುಗಳನ್ನು ಜಾರಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು. ಮಹಿಳಾ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಭದ್ರತೆಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಮೋದಿ ಹೇಳಿದ್ದು... *ಹೆಣ್ಣುಮಗಳು ಮನೆಗೆ ತಡವಾಗಿ ಬಂದರೆ ಪೋಷಕರು ಆಕೆಯನ್ನು ಪ್ರಶ್ನಿಸುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಮಗನನ್ನೂ ಕೇಳಬೇಕು *ಭಾರತೀಯ ನ್ಯಾಯಸಂಹಿತೆಯು ಮಹಿಳೆಯ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳನ್ನು ಬಲಪಡಿಸಿದೆ *ದೂರು ದಾಖಲಿಸುವುದನ್ನು ಸರಳಗೊಳಿಸಲಾಗಿದೆ ಮತ್ತು ತುರ್ತಾಗಿ ನ್ಯಾಯ ಒದಗಿಸಲಾಗುತ್ತಿದೆ *ಸರ್ಕಾರವು ಮಹಿಳೆಯರ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಿದೆ
ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಮುರ್ಮುಗೆ ಪತ್ರ
ಮುಂಬೈ: ಮಹಿಳೆಯ ವಿರುದ್ಧ ದೌರ್ಜನ್ಯ ನಡೆಸಿದ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಅನುಮತಿ ನೀಡಬೇಕು ಮತ್ತು ಶಿಕ್ಷೆಯಿಂದ ರಕ್ಷಣೆ ನೀಡಬೇಕು ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಮಹಿಳಾ ಘಟಕವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಖಡಸೆ ಅವರು 'ಮಹಿಳೆಯು ದಬ್ಬಾಳಿಕೆ ಮತ್ತು ಅತ್ಯಾಚಾರಿ ಮನಃಸ್ಥಿತಿಯನ್ನು ಕೊಲ್ಲಲು ಬಯಸುತ್ತಾಳೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಹೆಚ್ಚುತ್ತಿದೆ. ಎಲ್ಲ ಮಹಿಳೆಯರ ಪರವಾಗಿ ದೌರ್ಜನ್ಯ ಎಸಗಿದ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಅನುಮತಿ ನೀಡಿ ಶಿಕ್ಷೆಯಿಂದ ರಕ್ಷಣೆ ನೀಡಬೇಕು' ಎಂದು ಕೋರಿದ್ದಾರೆ.
ಮಹಿಳಾ ದಿನದ ವಿಶೇಷಗಳು
* ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಮಹಿಳೆಯರನ್ನು ಒಳಗೊಂಡ ಭದ್ರತಾ ತಂಡವು ಶನಿವಾರ ರಕ್ಷಣೆ ನೀಡಿತು. ಯಾದವ್ ಅವರ ವಾಹನ ಚಾಲನೆ ಭದ್ರತೆ ಸೇರಿದಂತೆ ಎಲ್ಲವನ್ನೂ ಮಹಿಳಾ ಅಧಿಕಾರಿಗಳು ನಿರ್ವಹಿಸಿದರು
* ಜಾರ್ಖಂಡ್‌ನಲ್ಲಿ ರಾಂಚಿ-ಟೋರಿ ಪ್ರಯಾಣಿಕ ರೈಲನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಿದರು
*ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು 100 ಗುಲಾಬಿ ಬಣ್ಣದ ಆಟೊಗಳನ್ನು ಮಹಿಳಾ ಫಲಾನುಭವಿಗಳಿಗೆ ವಿತರಿಸಿದರು
*ರೈಲ್ವೆ ಸುರಕ್ಷತಾ ಪಡೆಯ ಮಹಿಳಾ ಸಿಬ್ಬಂದಿಗೆ ಚಿಲ್ಲಿ ಸ್ಪ್ರೇ ಕ್ಯಾನ್‌ಗಳನ್ನು (ಖಾರದ ಪುಡಿಯ ಸ್ಪ್ರೇ) ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಮಹಿಳಾ ಸಿಬ್ಬಂದಿಗೆ ತಮಗೆ ಎದುರಾಗುವ ಸವಾಲುಗಳು ಬೆದರಿಕೆಗಳನ್ನು ನಿಭಾಯಿಸಲು ಇದು ನೆರವಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
* 'ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಸಾಯಿನಗರ್ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಲೋಕೊ ಪೈಲಟ್‌ನಿಂದ ಹಿಡಿದು ರೈಲು ಸೇವೆಯ ಎಲ್ಲ ವರ್ಗದ ಸಿಬ್ಬಂದಿಯೂ ಮಹಿಳೆಯರೇ ಆಗಿದ್ದರು. ಶನಿವಾರ ಏಷ್ಯಾದ ಮೊದಲ ಲೋಕೊ ಪೈಲಟ್ ಸುರೇಖಾ ಯಾದವ್ ಅವರು ರೈಲನ್ನು ಚಲಾಯಿಸಿದರು. ರೈಲ್ವೆ ಇಲಾಖೆಯಲ್ಲಿ ಇಂತಹ ಪ್ರಯೋಗ ನಡೆದದ್ದು ಇದೇ ಮೊದಲು. 'ಮುಂಬೈ ಉಪನಗರದಲ್ಲಿರುವ ಮಾಟುಂಗಾ ರೈಲು ನಿಲ್ದಾಣದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಿದರು. ಈ ನಿಲ್ದಾಣವನ್ನೂ ವಂದೇ ಭಾರತ್ ರೈಲು ಹಾದು ಹೋಗಿದೆ. ಈ ವೇಳೆ ಮಹಿಳೆಯರೇ ನಿರ್ವಹಿಸುವ ರೈಲು ನಿಲ್ದಾಣದ ಸಿಬ್ಬಂದಿ ಹಾಗೂ ವಂದೇ ಭಾರತ್ ರೈಲಿನ ಮಹಿಳಾ ಸಿಬ್ಬಂದಿ ಸಂಭ್ರಮ ಹಂಚಿಕೊಂಡಿದ್ದಾರೆ' ಎಂದು ಕೇಂದ್ರ ರೈಲ್ವೆ ಹೇಳಿದೆ.




