ನವದೆಹಲಿ: ಭಾರತವು ವಿಶ್ವದ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗುವತ್ತ ಹೆಜ್ಜೆ ಇರಿಸುತ್ತಿರುವ ಸಂದರ್ಭದಲ್ಲಿ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಯೋಜಿಸಿದ್ದ ರಾಷ್ಟ್ರೀಯ ಸಮಾಲೋಚಲಾ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಈ ಗುರಿಯ ಈಡೇರಿಕೆಗೆ ಬಹಳ ಮುಖ್ಯ ಎಂದರು.
ವಿಕಸಿತ ಭಾರತ ನಿರ್ಮಾಣ ಮಾಡಲು 'ಮಹಿಳೆಯರನ್ನು ಸ್ವಾವಲಂಬಿ, ಸ್ವತಂತ್ರ ಮತ್ತು ಸಶಕ್ತರನ್ನಾಗಿಸುವುದು' ಮಹತ್ವದ್ದು ಎಂದರು. ಸ್ವಾವಲಂಬನೆ ಮತ್ತು ಯಶಸ್ಸಿನ ಕಡೆ ಸಾಗಲು ಎಲ್ಲರೂ ಮಹಿಳೆಯರಿಗೆ ಪ್ರತಿ ಹೆಜ್ಜೆಯಲ್ಲೂ ನೆರವಾಗಬೇಕು ಎಂದು ಕರೆ ನೀಡಿದರು.
'ಯಾವುದೇ ಮಗು, ಅದು ಗಂಡಿರಲಿ ಹೆಣ್ಣಿರಲಿ, ಒಬ್ಬಂಟಿಯಾಗಿ ಪ್ರಯಾಣಿಸಲು ಮತ್ತು ಒಬ್ಬಂಟಿಯಾಗಿ ಜೀವನ ನಡೆಸಲು ಭಯಪಡದ ಆದರ್ಶ ಸಮಾಜವನ್ನು ನಾವು ಕಟ್ಟಬೇಕು' ಎಂದರು.




