ಕಾಸರಗೋಡು: ಕೇಂದ್ರೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ಚಾಲಿಂಗಾಲ್ ಮೊಟ್ಟ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ರಾತ್ರಿ ಕಾಲ ಕಫ್ರ್ಯೂ ಹೇರಿ ಅರಣ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ(ಡಿಎಫ್‍ಓ)ನಿರ್ದೇಶ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ.
ರಾತ್ರಿ 8ರಿಂದ ಬೆಳಗ್ಗೆ 7ರ ವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ. ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ ತೋಟಗಾರಿಕಾ ನಿಗಮದ ಪೆರಿಯ ಗೇರುತೋಟ ವಲಯದ ಮಧ್ಯಭಾಗದಲ್ಲಿದ್ದು, ಆಸುಪಾಸು ಬೃಹತ್ ಮರಗಳನ್ನು ಹೊಂದಿದ ಕಾಡು ಆವರಿಸಿದೆ. ವಿಶ್ವ ವಿದ್ಯಾಲಯದಲ್ಲಿ 2ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಚಿರತೆ ಸಂಚಾರದ ಭೀತಿ ವಿದ್ಯಾರ್ಥಿಗಳಲ್ಲೂ ಅವರಿಸಿದೆ.
ಯಾವುದೇ ಮಾತ್ರಕ್ಕೂ ವಿದ್ಯಾರ್ಥಿಗಳು ವಿಶ್ರಾಂತಿ ಪಡೆದುಕೊಳ್ಳಲು ಕ್ಯಾಂಪಸ್ ಅವರಣದ ಮರದಡಿ ಹೋಗಿ ಕುಳಿತುಕೊಳ್ಳಬಾರದು, ಕ್ಯಾಂಪಸ್‍ನೊಳಗೆ ನಾಯಿ, ಬೆಕ್ಕುಗಳಿಗೆ ತಿನ್ನಲು ಆಹಾರ ನೀಡಿ, ಅವುಗಳನ್ನು ಕ್ಯಾಂಪಸ್‍ನೊಳಗೆ ಸಾಕದಿರುವಂತೆಯೂ ಸೂಚಿಸಲಾಗಿದೆ. ಕ್ಯಾಂಪಸ್‍ನೊಳಗೆ ನಾಯಿ, ಬೆಕ್ಕುಗಳು ಕಂಡುಬಂದಲ್ಲಿ ಹೊರಕ್ಕೆ ಓಡಿಸುವಂತೆಯೂ ಸೂಚಿಸಲಾಗಿದೆ. ರಾತ್ರಿ ವೇಳೆ ಕ್ಯಾಂಪಸ್ ವಠಾರದಲ್ಲಿ ಒಂಟಿಯಾಗಿ ತಿರುಗಾಡದೆ, ಕೊಠಡಿಯೊಳಗೆ ಇರಬೇಕು. ತುರ್ತು ಸಂದರ್ಭ ಸೆಕ್ಯೂರಿಟಿ ಗಾರ್ಡ್‍ಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮದೊಂದಿಗೆ ತೆರಳುವಂತೆ ಸೂಚಿಸಲಾಗಿದೆ.
ಪೆರಿಯ ಚಾಲಿಂಗಾಲ್ ಪ್ರದೇಶದಲ್ಲಿ ಚಿರತೆ ಸಂಚಾರದ ವದಂತಿ ಕೇಳಿಬಂದ ಮರುದಿನ ಸಾಕುನಾಯಿಯನ್ನು ಕೊಂದುಹಾಕರಿವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ವ್ಯಾಪಕ ಶೋಧ ಆರಂಭಿಸಿದ್ದಾರೆ.




