ಕಾಸರಗೋಡು: ತ್ಯಾಜ್ಯ ಮುಕ್ತ ನವಕೇರಳ ಜಿಲ್ಲಾ ನಿರ್ವಹಣಾ ಸಮಿತಿಯ ಸಭೆಯು ಜಿಲ್ಲಾಧಿಕಾರಿ ಕಛೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ತ್ಯಾಜ್ಯ ಮುಕ್ತ ನವ ಕೇರಳದ ಹಸಿರು ಘೋಷಣೆಗೆ ಸಂಬಂಧಿಸಿದ ಪ್ರಗತಿಯನ್ನು ಗುರುತಿಸಿ ಹಸಿರು ಶಾಲೆಗಳು, ಹಸಿರು ಕಛೇರಿಗಳು, ಹಸಿರು ನಗರಗಳು, ಹಸಿರು ಸಾರ್ವಜನಿಕ ಸ್ಥಳಗಳು, ಹಸಿರು ಪ್ರವಾಸೋದ್ಯಮ ಕೇಂದ್ರಗಳು, ಹಸಿರು ಕಾಲೇಜುಗಳು ಮತ್ತು ಹಸಿರು ಗ್ರಂಥಾಲಯಗಳನ್ನು ನಿಮಿಸಲು ನಿರ್ಣಯಿಸಲಾಯಿತು.
ಶುಚೀಕರಣ ಚಟುವಟಿಕೆಗಳಿಗೆ ಸಂಬಂಧಿಸಿದ ಮೂಲಭೂತಸೌಕರ್ಯ ಚಟುವಟಿಕೆಗಳು, ಎಂ.ಸಿಎಫ್‍ಗಳು, ಮಿನಿ ಎಂಸಿಎಫ್‍ಗಳು, ಮನೆ ಮನೆ ಸಂಗ್ರಹ ಮತ್ತು ಹರಿತ ಮಿತ್ರಂ ಅಪ್ಲಿಕೇಶನ್ ಅನ್ನು ಸೂಕ್ಷ್ಮವಾಗಿ ಮೌಲ್ಯಮಾಪನ ಮಾಡಲಾಯಿತು. ನಂತರ ಮಾರ್ಚ್ 30 ರ ಮೊದಲು ಎಲ್ಲಾ ವಾರ್ಡ್‍ಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಿ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ.
ಪ್ರತಿ ವಾರ್ಡ್‍ನಲ್ಲಿಯೂ ಅಸ್ತಿತ್ವದಲ್ಲಿರುವ ಶುಚಿತ್ವ ಕಾರ್ಯದಲ್ಲಿ ಅಂತರ ಕಂಡು ಬಂದರೆ, ಅದನ್ನು ಮೆಗಾ ಕ್ಲೀನಿಂಗ್ ಅಭಿಯಾನದ ಮೂಲಕ ಪೂರ್ಣಗೊಳಿಸಬೇಕು. ಮಾರ್ಚ್ 27 ರ ಮೊದಲು ಸಾಮೂಹಿಕ ಶುಚೀಕರಣ ಚಟುವಟಿಕೆಗಳನ್ನು ನಡೆಸುವ ಮೂಲಕ ಎಲ್ಲಾ ಚರಂಡಿಗಳನ್ನು ಹಾಗೂ ರಸ್ತೆಬದಿಯನ್ನು ಸ್ವಚ್ಛಗೊಳಿಸಬೇಕು ಎಂದು ಸೂಚಿಸಲಾಯಿತು. ಮಾರ್ಚ್ 30 ರಂದು ಮಧ್ಯಾಹ್ನ 2 ರಿಂದ 6 ರವರೆಗೆ ಮುಖ್ಯಮಂತ್ರಿಗಳು ಸ್ವಚ್ಛತಾ ಅಭಿಯಾನದ ಘೋಷಣೆ ಮಾಡಲಿದ್ದಾರೆ. ಪ್ರಸಕ್ತ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಿ ಅದರ ಆಧಾರದ ಮೇಲೆ ಪಂಚಾಯಿತಿಗಳು ಮತ್ತು ನಗರಸಭೆಗಳ ಘೋಷಣೆಗಳನ್ನು ಮಾಡಬೇಕೆಂದು ಸೂಚಿಸಲಾಯಿತು.
ಏಪ್ರಿಲ್ 3 ರಂದು ಬ್ಲಾಕ್ ಮಟ್ಟ ಹಾಗೂ ಏಪ್ರಿಲ್ 5 ರಂದು ಜಿಲ್ಲಾ ಮಟ್ಟದಲ್ಲಿ ಘೋಷಣೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಕಾರ್ಯಕಾರಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಆಗಿರುವ ಬೇಬಿ ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್‍ಬೀಗಂ, ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ.ಎ. ಶೈಮಾ, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್. ಸರಿತಾ, ಸುಚಿತ್ವಾ ಮಿಷನ್ ಸಂಯೋಜಕ ಪಿ. ಜಯನ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶ್ಯಾಮಲಕ್ಷ್ಮಿ, ಮತ್ತು ಕೆ.ಎಸ್.ಡಬ್ಲ್ಯೂ.ಎಂ.ಪಿ. ಜಿಲ್ಲಾ ಖಾಸಗಿ ವ್ಯವಸ್ಥಾಪಕ ಮಿಥುನ್ ಕೃಷ್ಣನ್ ಭಾಗವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜಿ. ಸುಧಾಕರನ್ ಸ್ವಚ್ಛತಾ ಘೋಷಣೆಯ ಮಾರ್ಗಸೂಚಿ ಮಂಡಿಸಿದರು. ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮನೋಜ್ ವಂದಿಸಿದರು.

