ಕಾಸರಗೋಡು: ಮುಳಿಯಾರು ಪಂಚಾಯತಿ ವ್ಯಾಪ್ತಿಯ ಇರಿಯಣ್ಣಿ ಬೇಪು ಎಂಬಲ್ಲಿ ಮನೆಯಂಗಳದಲ್ಲಿ ಕಟ್ಟಿಹಾಕಲಾಗಿದ್ದ ಸಾಕುನಾಯಿಯನ್ನು ಚಿರತೆ ಕೊಂದುಹಾಕಿ, ಇದರ ತಲೆಭಾಗವನ್ನು ಅಂಗಳದಲ್ಲಿ ಬಿಟ್ಟು ದೇಹವನ್ನು ಕೊಂಡೊಯ್ದಿದೆ.
ಇರಿಯಣ್ಣಿಯ ಬೇಪು ನಿವಾಸಿ ನಾರಾಯಣನ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ ಮನೆಯಂಗಳಕ್ಕೆ ಆಗಮಿಸಿದ ಚಿರತೆ ನಾಯಿಯನ್ನು ಆಕ್ರಮಿಸಿ, ರುಂಡ ಬೇರ್ಪಡಿಸಿ ಮನೆಯಂಗಳದಲ್ಲೇ ಉಪೇಕ್ಷಿಸಿದೆ. ನಾಯಿ ಜೋರಾಗಿ ಬೊಗಳುವ ಶಬ್ದ ಕೇಳಿ ಮನೆಯವರು ಎದ್ದು ಹೊರಬರುವಷ್ಟರಲ್ಲಿ ನಾಯಿಯ ಕತ್ತು ತುಂಡರಿಸಿ ದೇಹವನ್ನು ಚಿರತೆ ಹೊತ್ತೊಯ್ದಿದೆ. ಮಾಹಿತಿ ತಿಳಿದು ಆಸುಪಾಸಿನವರು ಸ್ಥಳಕ್ಕಾಗಮಿಸಿದ್ದು, ನಾಗರಿಕರು ಪರಿಸರದಲ್ಲಿ ಹುಡುಕಾಡಿದಾಗ ನೂರು ಮೀಟರ್ ದೂರದಲ್ಲಿ ಚಿರತೆ ನಾಯಿಯನ್ನು ತಿಂದಿರುವ ಕುರುಹು ಪತ್ತೆಯಾಗಿದೆ. ನಿತ್ಯವೂ ಗೂಡಲ್ಲಿ ಕಟ್ಟಿ ಹಾಕುವ ಸಾಕು ನಾಯಿಯನ್ನು ಎರಡು ದಿವಸಗಳಿಂದ ಅಂಗಳದಲ್ಲಿ ಕಟ್ಟಿ ಹಾಕಿದ್ದರು. ಇದನ್ನು ಗಮನಿಸಿ ಚಿರತೆ ಹೊಂಚು ಹಾಕಿ ಆಕ್ರಮಣ ನಡೆಸಿರಬೇಕೆನ್ನಲಾಗಿದೆ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ ಚಿರತೆ ಹೆಜ್ಜೆ ಗುರುತು ಮತ್ತು ನಾಯಿಯ ಎಲುಬು ಪತ್ತೆ ಹಚ್ಚಿದ್ದಾರೆ.
ರಾತ್ರಿ ವೇಳೆ ನಾಯಿ ಸತತವಾಗಿ ಬೊಗಳುತ್ತಿದ್ದರೂ, ಮನೆಯವರು ಗಮನಹರಿಸಿರಲಿಲ್ಲ. ನಂತರ ಏಕಾಏಕಿ ಬೊಬ್ಬಿಡಲು ತೊಡಗುತ್ತಿದ್ದಂತೆ ಎಚ್ಚರಗೊಂಡಿದ್ದರು. ಮುಳಿಯಾರು, ಬೇಡಡ್ಕ ಸೇರಿದಂತೆ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಸಂಚಾರದ ಬಗ್ಗೆ ಭೀತಿ ಹೆಚ್ಚಾಗಿದೆ. ಎರಡು ದಿವಸಗಳ ಹಿಂದೆಯಷ್ಟೆ ಪಾಂಡಿಕಂಡ ಪ್ರದೇಶದ ಸಿಸಿ ಕ್ಯಾಮರಾದಲ್ಲಿ ಚಿರತೆ ಸಂಚಾರದ ದೃಶ್ಯ ಸೆರೆಯಾಗಿದ್ದು, ಇದೇ ಚಿರತೆ ನಾಯಿಯನ್ನು ಕೊಂದಿರಬೇಕೆಂದು ಸಂಶಯಿಸಲಾಗಿದೆ. ಚಿರತೆ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅರ್‍ಆರ್‍ಟಿ ತಂಡ ಮತ್ತೆ ಸಕ್ರಿಯವಾಗಿದೆ.




