ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ 2025 - 26 ನೇ ಸಾಲಿನ ಗ್ರಾಮ ಪಂಚಾಯತಿ ಬಜೆಟನ್ನು ತ್ಯಾಜ್ಯ ನಿರ್ಮೂಲನ, ಕೃಷಿ ಹಾಗೂ ವಸತಿ ಯೋಜನೆಗಳಿಗೆ ಪ್ರಾಧಾನ್ಯತೆ ನೀಡಿ ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಸೋಮವಾರ ಮಂಡಿಸಿದರು.
ಸುಮಾರು ಒಂದು ತಾಸಿನ ತನಕ ದೀರ್ಘಾವಧಿಯಲ್ಲಿ ಮುಗಿಸಿದ ಈ ಬಜೆಟ್ ಉಪಾಧ್ಯಕ್ಷರ ಪಾಲಿಗೆ ಇದು 5 ನೇ ಬಜೆಟ್ ಆಗಿತ್ತು.
ವಿರೋಧ ಪಕ್ಷಗಳಿಂದ ಯಾವುದೇ ಸದ್ದು ಗದ್ದಲಗಳಿಲ್ಲದೆ ಆಡಳಿತ ಸಮಿತಿಯ ವಿರುದ್ಧ ಯಾವುದೇ ಘೋಷಣೆಗಳಿಲ್ಲದೆ ನಡೆದ ಶಾಂತಯತ ಬಜೆಟ್ ಗಮನ ಸೆಳೆಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ತ್ಯಾಜ್ಯ ವಸ್ತುಗಳ ನಿರ್ವಹಣೆ. ಹಸಿರು ಕ್ರಿಯಾಸೇನೆಯ ನೆರವಿನಿಂದ ಪ್ರಸ್ತುತ ಮನೆ, ಅಂಗಡಿಗಳಿಂದ ಬಳಕೆದಾರರ ಶುಲ್ಕ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಅದನ್ನು ವಿಲೇವಾರಿ ಮಾಡಲು ತೀವ್ರ ತೊಂದರೆ ಎದುರಿಸಲಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ಎಫ್‍ಎಸ್‍ಟಿಪಿ ಸ್ಥಾಪಿಸಲಾಗುವುದು. ಇದಕ್ಕಾಗಿ ಶುಚಿತ್ವ ಮಿಷನ್‍ನಿಂದ ಲಭಿಸುವ 2 ಕೋಟಿ ಅನುದಾನವನ್ನು ಬಳಸಲು ತೀರ್ಮಾನಿಸಲಾಗಿರುವುದಾಗಿ ಅವರು ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ ಒಟ್ಟು 85 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಹೇಳಿದ ಅವರು ಆರ್ಥಿಕತೆಯ ಬೆನ್ನೆಲುಬು ಕೃಷಿ ಕ್ಷೇತ್ರವಾಗಿದೆ, ಆದ್ದರಿಂದ ನಾವು ಈ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ರಾಜ್ಯ ಸರ್ಕಾರದ ಸಮಗ್ರ ವಸತಿ ಯೋಜನೆಯಾದ ಲೈಫ್ ಮಿಷನ್ ಜೊತೆಗೆ ಜಾರಿಗೆ ತರಲಾದ ಲೈಫ್ ವಸತಿ ಯೋಜನೆಗೆ ಮೂರು ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಒಟ್ಟು 50 ಲಕ್ಷ ರೂಪಾಯಗಳನ್ನು ನಿಗದಿಪಡಿಸಲಾಗಿದೆ.ಮಕ್ಕಳ ವಲಯದಲ್ಲಿ 60,00,000 ರೂ. ಮೀಸಲಿಡಲಾಗಿದೆ. ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರ ಉನ್ನತಿಗಾಗಿ ಬಜೆಟ್‍ನಲ್ಲಿ 37 ಲಕ್ಷ-ರೂ.ಗಳನ್ನು ನಿಗದಿಪಡಿಸಲಾಗಿದೆ.
ಮೂಲಸೌಕರ್ಯ ಸುಧಾರಣೆಗೆ ಒಟ್ಟು 5.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.ವಿವಿಧ ವಾರ್ಡ್‍ಗಳಲ್ಲಿರುವ ಕುಡಿಯುವ ನೀರಿನ ಯೋಜನೆಗಳ ಸುಧಾರಣೆ ಮತ್ತು ಹೊಸ ಯೋಜನೆಗಳಿಗೆ 38 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ.
2025-26 ನೇ ಹಣಕಾಸು ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 45 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ.ಆರೋಗ್ಯ ಕ್ಷೇತ್ರಕ್ಕೆ ಒಟ್ಟು 30 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ. ತ್ಯಾಜ್ಯ ವಿಲೇವಾರಿ ಕ್ಷೇತ್ರಕ್ಕೆ ಒಟ್ಟು 70 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಒಟ್ಟು 9 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ.ಡೈರಿ ಗುಂಪುಗಳ ಮೂಲಕ ಸಂಗ್ರಹಿಸಲಾದ ಹಾಲಿಗೆ ಸಬ್ಸಿಡಿ ವಿತರಣೆಗೆ 4.5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
ಸಂಪೂರ್ಣ ಅಭಿವೃದ್ಧಿಯ ಗುರಿಯೊಂದಿಗೆ ಈ ಆಡಳಿತ ಮಂಡಳಿ ಮೂರು ವರ್ಷಗಳಿಂದ ಉತ್ತಮ ಹಾದಿಯಲ್ಲಿ ಕೆಲಸ ನಿರ್ವಹಿಸುತಿದ್ದು, ಸವಾಲುಗಳು, ಬಿಕ್ಕಟ್ಟುಗಳು ಬಂದರೂ ಪಂಚಾಯತಿಯು ಆತ್ಮವಿಶ್ವಾಸ ಕಳೆದುಕೊಳ್ಳದೆ ಅಭಿವೃದ್ಧಿ ಸೇವಾ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧನೆಗೆ ಪ್ರಯತ್ನಿಸುತ್ತಿದೆ. ಪಂಚಾಯಿತಿಗೆ ಆಡಳಿತ ಪಕ್ಷ, ಪ್ರತಿಪಕ್ಷ, ವಿರೋಧ ಪಕ್ಷಗಳು ಎಂಬ ಸಂಬಂಧವಿಲ್ಲ, ಹೀಗಾಗಿ ಪಂಚಾಯಿತಿಯ ಅಭಿವೃದ್ಧಿ ಪಯಣದಲ್ಲಿ ಪರಸ್ಪರ ಸಹಕಾರದಿಂದ ಮಂಜೇಶ್ವರದ ಭವಿಷ್ಯವನ್ನು ಸುಭಿಕ್ಷಗೊಳಿಸುವ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗೋಣ ಎಂಬುದಾಗಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಕೇಳಿ ಕೊಂಡರು.
ಮಂಜೇಶ್ವರ ಗ್ರಾಮ ಪಂಚಾಯತಿ 2025-26ನೇ ಹಣಕಾಸು ವರ್ಷದ ಬಜೆಟ್ 28,49,81,819 ಕೋಟಿ ರೂಪಾಯಿ ಆದಾಯ, ಹಾಗೂ 28,16,31,000 ಕೋಟಿ ರೂಪಾಯಿ ವೆಚ್ಚ ಹಾಗೂ 33,50,819 ಲಕ್ಷ ರೂಪಾಯಿ ಮೀಸಲು ಹೊಂದಿರುವುದಾಗಿ ಉಪಾಧ್ಯಕ್ಷ ಬಜೆಟ್ ಮಂಡನೆಯಲ್ಲಿ ತಿಳಿಸಿದರು.ಅಧ್ಯಕ್ಷೆ ಜೀನ್ ಲವೀನ ಮೊಂತೇರೋ ಸಹಿತ ಸದಸ್ಯರು ಉಪಸ್ಥಿತರಿದ್ದರು.




.jpg)

