ನವದೆಹಲಿ: ಕರ್ನಾಟಕದ ಸಚಿವರು, ರಾಜಕಾರಣಿಗಳು ಹಾಗೂ ನ್ಯಾಯಮೂರ್ತಿಗಳನ್ನು ಮಧುಬಲೆಗೆ ಬೀಳಿಸುವ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯಗ ಕರೊಲ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಸಾಮಾಜಿಕ ಕಾರ್ಯಕರ್ತ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಪಿಎಐಎಲ್ ಅನ್ನು ವಜಾಗೊಳಿಸಿದೆ.
ಪ್ರಕರಣವನ್ನು ಸುಪ್ರಿಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲ ಬರುನ್ ಕುಮಾರ್ ಸಿನ್ಹಾ, 'ಮಾಧ್ಯಮಗಳಲ್ಲಿ ಆರೋಪ ಕೇಳಿ ಬಂದಿದ್ದು, ಘಟನೆ ಹಿಂದಿರುವವರ ಬಗ್ಗೆ ತನಿಖೆ ನಡೆಸಬೇಕು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಮೂರ್ತಿಗಳನ್ನು ಮಧುಬಲೆಗೆ ಕೆಡವುವ ಯತ್ನವು ನ್ಯಾಯಾಲಯದ ಸ್ವಾಯತ್ತತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ' ಎಂದು ಹೇಳಿದರು.
'ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಗಳನ್ನು ಸೇರಿ ಹಲವರನ್ನು ಮಧುಬಲೆಗೆ ಕೆಡವಿದ್ದಾರೆ ಎಂದು ಕರ್ನಾಟಕದ ವಿಧಾನಸಭೆಯಲ್ಲೇ ಆರೋಪಿಸಿರುವುದನ್ನು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ' ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.




