ತಿರುವನಂತಪುರಂ: ಐದು ವಾರಗಳಿಂದ ತಿರುವನಂತಪುರಂ ಸಚಿವಾಲಯದ(ಸೆಕ್ರಟರಿಯೇಟ್) ಮುಂದೆ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತರ ಮುಷ್ಕರವನ್ನು ಪರಾಭವಗೊಳಿಸಿ ಹಿಮ್ಮೆಟ್ಟಿಸಲು ರಾಜ್ಯ ಆರೋಗ್ಯ ಇಲಾಖೆ ರಹಸ್ಯ ಕ್ರಮ ಕೈಗೊಳ್ಳುತ್ತಿದೆ.
ಸೋಮವಾರ, ಆಶಾ ಕಾರ್ಯಕರ್ತರು ಸಚಿವಾಲಯವನ್ನು ಮುತ್ತಿಗೆ ಹಾಕುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲು ನಿರ್ಧರಿಸಿದ್ದು, ಆರೋಗ್ಯ ಇಲಾಖೆ ತರಬೇತಿ ಕಾರ್ಯಕ್ರಮವನ್ನು ಅದೇ ದಿನ ಆಯೋಜಿಸಲು ನಿರ್ಧರಿಸಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಸೂಚನೆಯಂತೆ ಸೋಮವಾರ ಆಶಾ ಕಾರ್ಯಕರ್ತರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಎಲ್ಲಾ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ. ತಿರುವನಂತಪುರಂ ನಿಂದ ಕೊಟ್ಟಾಯಂ ವರೆಗಿನ ಜಿಲ್ಲೆಗಳ ಆಶಾ ಕಾರ್ಯಕರ್ತರಿಗೆ ಈ ತರಬೇತಿ ನೀಡಲಾಗುತ್ತದೆಯಂತೆ. ದಕ್ಷಿಣದ ಈ ಜಿಲ್ಲೆಗಳ ಆಶಾ ಕಾರ್ಯಕರ್ತರು ಸಚಿವಾಲಯದ ಮುತ್ತಿಗೆಯನ್ನು ತಲುಪುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.





