ಕಾಸರಗೋಡು: ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ನೀರಿನ ಕೊರತೆ ನೀಗಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದರು.
ಅವರು 'ನಮ್ಮ ಕಾಸರಗೋಡು' ಮುಖಾಮುಖಿ ಕಾರ್ಯಕ್ರಮದಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್‍ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ವಿವಿಧ ಕೈಗಾರಿಕಾ ಎಸ್ಟೇಟ್‍ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚಿಸಲು, ನೀರಾವರಿ, ಕೆಎಸ್‍ಇಬಿ, ಜಿಲ್ಲಾ ಪಂಚಾಯಿತಿ, ಕಾಞಂಗಾಡು ನಗರಸಭೆ ಮತ್ತು ಮಡಿಕೈ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಲಾಗುವುದು. ಕೈಗರಿಕಾ ಪ್ರಾಂಗಣದ ಸುತ್ತು ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
ಮಡಿಕೈ ಕೈಗಾರಿಕಾ ಪ್ರಾಂಗಣಕ್ಕೆ ಭೇಟಿ ನೀಡಿ, ಅಲ್ಲಿನ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆಮಾಡಿಕೊಂಡು, ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಕೈಗಾರಿಕಾ ಘಟಕಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಕೇರಳ ರಾಜ್ಯ ವಿದ್ಯುತ್ ಮಂಡಳಿ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕರು ಎಂಜಿನಿಯರ್ ಜತೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾಧಿಕಾರಿ ವಿಡಿಯೋ ಕಾನ್‍ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉದ್ಯಮಿಗಳಾದ ರತ್ನಾಕರನ್ ಮಾವಿಲ, ಕೆ. ಸಜಿತ್, ಕೆ.ಕೆ.ಇಬ್ರಾಹಿಂ, ವಿ. ತಂಬಾನ್, ಟಿ.ಎ.ಅಸ್ಲಾಂ, ಬಿ.ಎನ್.ರಘು, ರಾಜೇಶ್ ಕುಮಾರ್, ಕೆ. ವರ್ಷಿತ್, ಅಬ್ದುಲ್ ಹಾರಿಸ್, ಅಹಮದ್ ಅಲಿ, ಶಂಸೀರ್ ಅಲಿ, ಬದರುದ್ದೀನ್ ಮೊದಲಾದವರು ಪಾಲ್ಗೊಂಡಿದ್ದರು.





