ವಾಷಿಂಗ್ಟನ್: ಅಮೆರಿಕದಲ್ಲಿ ಇತ್ತೀಚಿನ ವಾರಗಳಲ್ಲಿ 1 ಸಾವಿರಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗಿದೆ ಅಥವಾ ಅಮೆರಿಕದಲ್ಲಿ ಅವರುಗಳ ವಾಸ್ತವ್ಯಕ್ಕೆ ಕಾನೂನು ಮಾನ್ಯತೆ ದೊರೆತಿದೆ.
ಅಲ್ಲದೆ, ಅಮೆರಿಕದಲ್ಲಿ ವಾಸ್ತವ್ಯ ಹೂಡಲು ಇದ್ದ ಅನುಮತಿಯನ್ನು ಡೊನಾಲ್ಡ್ ಟ್ರಂಪ್ ಆಡಳಿತವೂ ಏಕಾಏಕಿ ಹಿಂಪಡೆದಿದೆ ಎಂದು ಹಲವಾರು ಮಂದಿ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ವಿದ್ಯಾರ್ಥಿಗಳ ಕಾನೂನು ಮಾನ್ಯತೆ ರದ್ದುಪಡಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು, ಬಲವಂತದಿಂದ ಸ್ವದೇಶಕ್ಕೆ ಕಳುಹಿಸಲಾಗುವ ಭೀತಿ ಎದುರಿಸುತ್ತಿದ್ದರು. ಇವರಲ್ಲಿ ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಸೇರಿ ಹಲವು ವಿ.ವಿಗಳಲ್ಲದೆ, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿದ್ದರು.
ಶಿಕ್ಷಣ ಸಂಸ್ಥೆಗಳ ದಾಖಲೆಗಳ ಪ್ರಕಾರ, 160 ಕಾಲೇಜುಗಳ ಕನಿಷ್ಠ 1,024 ವಿದ್ಯಾರ್ಥಿಗಳ ವೀಸಾಗಳ ಕಾನೂನು ಮಾನ್ಯತೆಯು ಮರುಸ್ಥಾಪಿತವಾಗಿದೆ ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ.
ಕೇಂದ್ರ ಗಮನಿಸಲಿ-ಕಾಂಗ್ರೆಸ್ ಆಗ್ರಹ
ನವದೆಹಲಿ (ಪಿಟಿಐ): ವೀಸಾ ರದ್ದತಿ ಕೈಬಿಡಲು ಕೋರಿ ಅರ್ಜಿ ಸಲ್ಲಿಸಿರುವ ಭಾರತೀಯ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಅಮೆರಿಕ ಸರ್ಕಾರದ ಜೊತೆಗೆ ಚರ್ಚಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ವೀಸಾ ರದ್ದತಿ ಕೈಬಿಡಲು ಕೋರಿ ಅರ್ಜಿ ಸಲ್ಲಿಸಿರುವ 327 ವಿದೇಶಿ ವಿದ್ಯಾರ್ಥಿಗಳಲ್ಲಿ ಶೇ 50ರಷ್ಟು ಮಂದಿ ಭಾರತೀಯರಿದ್ದಾರೆ ಎಂಬಅಮೆರಿಕದ ವಲಸಿಗರ ವಕೀಲರ ಸಂಘದ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಈ ಆಗ್ರಹ ಮಾಡಿದೆ. ವೀಸಾ ರದ್ದತಿ ಮರುಪರಿಶೀಲನೆ ಕೋರಿರುವ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಇದ್ದಾರೆ ಎಂಬುದು ಕಳವಳಕಾರಿ ಸಂಗತಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು 'ಎಕ್ಸ್' ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




