ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತ ನಗರದ ಮೆಚುಆಪಟ್ಟಿ ಪ್ರದೇಶದ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಒಬ್ಬ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಮೃತರಲ್ಲಿ 11 ಮಂದಿ ಪುರುಷರು ಸೇರಿದ್ದಾರೆ. ಇದುವರೆಗೆ ಎಂಟು ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಕೋಲ್ಕತ್ತದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಹಿಂದಿನ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವ ವಿಧಿವಿಜ್ಞಾನ ತಂಡವು ಸೂಕ್ಷ್ಮ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 7.30ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. 42 ರೂಮ್‌ಗಳಿದ್ದ ಹೋಟೆಲ್‌ನಲ್ಲಿ ಒಟ್ಟು 88 ಜನ ಇದ್ದರು ಎಂದು ಹೇಳಲಾಗಿದೆ.
10 ಅಗ್ನಿಶಾಮಕ ವಾಹನಗಳ ನೆರವಿನಿಂದ ನಸುವಿನ ಜಾವ 3.30ರ ವೇಳೆಗೆ ಬಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕದಳ ಅಧಿಕಾರಿ ತಿಳಿಸಿದ್ದಾರೆ.




