ನವದೆಹಲಿ: ಭಾರತದ ಬಗ್ಗೆ 'ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ' ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಗೃಹ ಸಚಿವಾಲಯದ ಶಿಫಾರಸಿನಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನಿರ್ಬಂಧಕ್ಕೆ ಒಳಗಾಗಿರುವ ಯೂಟ್ಯೂಬ್ ಚಾನೆಲ್‌ಗಳಲ್ಲಿ ಡಾನ್ ನ್ಯೂಸ್, ಸಮಾ ಟಿ.ವಿ, ಜಿಯೊ ನ್ಯೂಸ್, ಸುನೊ ನ್ಯೂಸ್ ಮತ್ತು ಜಿಎನ್‌ಎನ್ ಕೂಡಾ ಸೇರಿವೆ.
'ಭಾರತದ ಬಗ್ಗೆ, ಭಾರತೀಯ ಸೇನೆ ಮತ್ತು ಭದ್ರತಾ ಏಜೆನ್ಸಿಗಳ ಬಗ್ಗೆ ಸುಳ್ಳು ಹಾಗೂ ಕಪೋಲಕಲ್ಪಿತ ಮಾಹಿತಿ ಪ್ರಸಾರ ಮಾಡಿರುವುದಕ್ಕೆ ಪಾಕಿಸ್ತಾನದ ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸುವಂತೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.




