ನವದೆಹಲಿ: 'ಕಾಜಿ ನ್ಯಾಯಾಲಯ, ಕಾಜಿಯತ್ ನ್ಯಾಯಾಲಯ, ಷರಿಯಾ ನ್ಯಾಯಾಲಯ ಎಂಬ ಹೆಸರುಗಳು ಏನೇ ಇರಲಿ. ಅವುಗಳಿಗೆ ಕಾನೂನಿನ ಅಡಿಯಲ್ಲಿ ಯಾವುದೇ ಮಾನ್ಯತೆ ಇಲ್ಲ' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮುಸ್ಲಿಂ ಮಹಿಳೆಯೊಬ್ಬರು ಜೀವನಾಂಶ ಕೋರಿ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ.
ಇಂತಹ ನ್ಯಾಯಾಲಗಳು ನೀಡುವ ಯಾವುದೇ ಆದೇಶವನ್ನು ಯಾರೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ, ಆದೇಶಗಳನ್ನು ಬಲವಂತದ ಕ್ರಮದ ಮೂಲಕ ಜಾರಿಗೆ ತರಲು ಅವಕಾಶವೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
'ಅಂತಹ ನ್ಯಾಯಾಲಯಗಳು ನೀಡುವ ಆದೇಶಗಳನ್ನು ಸಂಬಂಧಪಟ್ಟವರು ಪಾಲಿಸಿದಾಗ, ಆದೇಶಗಳು ಯಾವುದೇ ಕಾನೂನಿಗೆ ವಿರುದ್ಧವಾಗಿ ಇಲ್ಲದಿದ್ದಾಗ ಮಾತ್ರ ಅಂತಹ ಆದೇಶಗಳು ಕಾನೂನಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬಲ್ಲವು' ಎಂದು ಪೀಠ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಶಾಹಜಹಾನ್ ಎನ್ನುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಝಾನ್ಸಿಯ ಕೌಟುಂಬಿಕ ನ್ಯಾಯಾಲಯವೊಂದು ತಮಗೆ ಜೀವನಾಂಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಾಹಜಹಾನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಶಾಹಜಹಾನ್ ಅವರ ಮಕ್ಕಳಿಗೆ ಮಾತ್ರ ಅನ್ವಯವಾಗುವಂತೆ ₹2,500 ಕೊಡಲು ಕೌಟುಂಬಿಕ ನ್ಯಾಯಾಲಯ ಸೂಚಿಸಿತ್ತು.
ಶಾಹಜಹಾನ್ ಅವರ ವಿವಾಹವು 2002ರಲ್ಲಿ ಇಸ್ಲಾಮಿಕ್ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಇದು ಪತಿ, ಪತ್ನಿಗೆ ಎರಡನೆಯ ಮದುವೆಯಾಗಿತ್ತು.
ಅರ್ಜಿದಾರ ಮಹಿಳೆಗೆ ಜೀವನಾಂಶ ನಿರಾಕರಿಸಬಾರದಿತ್ತು ಎಂದು ಪೀಠವು ಹೇಳಿದೆ. ಆಕೆಗೆ ಪ್ರತಿ ತಿಂಗಳು ₹4,000 ಜೀವನಾಂಶ ಕೊಡಬೇಕು ಎಂದು ಆದೇಶಿಸಿದೆ. ದ್ವಿಚಕ್ರ ವಾಹನ ಹಾಗೂ ₹50 ಸಾವಿರ ಕೊಡಲು ಆಗದೆ ಇದ್ದುದಕ್ಕಾಗಿ ಪತಿಯು ತನ್ನ ಮೇಲೆ ಕ್ರೌರ್ಯ ಎಸಗಿದ್ದಾನೆ ಎಂದು ಪತ್ನಿ ದೂರಿದ್ದರು.




