ನವದಹೆಲಿ: ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ಐಎನ್‌ಎಸ್ ವಿಕ್ರಾಂತ್‌ಗಾಗಿ 26 ರಫೆಲ್-ಎಂ ಜೆಟ್ ಖರೀದಿಸಲು ₹64 ಸಾವಿರ ಕೋಟಿ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸೋಮವಾರ ಸಹಿ ಹಾಕಿವೆ.
ವರ್ಚುವಲ್ ವೇದಿಕೆಯಲ್ಲಿ ಈ ಒಡಂಬಡಿಕೆ ಸಹಿ ಸಮಾರಂಭ ನಡೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಡಂಬಡಿಕೆಗೆ ಸಹಿ ಹಾಕಿದರು.
ಫ್ರಾನ್ಸ್‌ನ ಯುದ್ಧ ವಿಮಾನ ತಯಾರಿಕಾ ಕಂಪನಿ ಡಸಾಲ್ಟ್ ಏವಿಯೇಷನ್ ಮೂಲಕ ಭಾರತ ನೌಕಾದಳವು 26 ರಫೆಲ್-ಎಂ ಜೆಟ್ ವಿಮಾನಗಳನ್ನು ಪಡೆಯಲಿದೆ.
ಈ ಖರೀದಿಗೆ ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟದ ಭದ್ರತಾ ಸಮಿತಿ ಒಪ್ಪಿಗೆ ಸೂಚಿಸಿತ್ತು.
ಈ ಒಪ್ಪಂದದನ್ವಯ ರಫೆಲ್ ಯುದ್ಧ ವಿಮಾನಗಳು ಐದು ವರ್ಷಗಳ ಬಳಿಕೆ ಭಾರತೀಯ ನೌಕಾದಳ ಸೇರಲಿವೆ. ಈವರೆಗೂ ಭಾರತೀಯ ವಾಯುಸೇನೆಯು 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಭವಿಷ್ಯದಲ್ಲಿ ಕನಿಷ್ಠ ಎರಡು ಸ್ಕ್ವಾಡ್ರನ್‌ನಷ್ಟು (1 ಸ್ಕ್ವಾಡ್ರನ್=18 ಯುದ್ಧ ವಿಮಾನಗಳು) ರಫೆಲ್ ಜೆಟ್‌ಗಳನ್ನು ಖರೀದಿಸಲಿದೆ ಎಂದೆನ್ನಲಾಗಿದೆ. ಕಳೆದ ಐದು ವರ್ಷಗಳಲ್ಲಿ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಉತ್ತಮವಾಗಿದೆ.
2023ರ ಜುಲೈನಲ್ಲಿ ನಡೆದ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದದಂತೆ ಜೆಟ್ ಮತ್ತು ಹೆಲಿಕಾಪ್ಟರ್ ಎಂಜಿನ್‌ಗಳನ್ನು ಜಂಟಿ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಒಪ್ಪಂದ ನೆರವೇರಿತ್ತು.




