ನವದೆಹಲಿ: ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಮತ್ತು ಅಸಭ್ಯ ಕಂಟೆಂಟ್ ಪ್ರಸಾರದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇವುಗಳ ನಿಯಂತ್ರಣಕ್ಕೆ ನಿಯಮಗಳ ಅಗತ್ಯವಿದೆ ಎಂದು ಹೇಳಿದೆ.
ಅಶ್ಲೀಲ ಕಂಟೆಂಟ್‌ಗಳ ಪ್ರಸಾರದ ಮೇಲೆ ನಿರ್ಬಂಧ ಹೇರಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರ, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೋಟಿಸ್ ಜಾರಿ ಮಡಿದೆ.
'ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ. ನೆಟ್‌ಫ್ಲಿಕ್ಸ್ ಇತ್ಯಾದಿಗಳಿಗೂ ನೋಟಿಸ್ ನೀಡುತ್ತಿದ್ದೇವೆ. ಅವರಿಗೂ ಸಾಮಾಜಿಕ ಜವಾಬ್ದಾರಿ ಇದೆ'ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ ಹೇಳಿದೆ.
ಒಟಿಟಿ/ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಸಭ್ಯ ದೃಶ್ಯಗಳ ಪ್ರಸಾರ ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಕಾರ್ಯಾಂಗ ಮತ್ತು ಶಾಸಕಾಂಗದ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಕೆಲವು ನಿಯಮಗಳು ಈಗಾಗಲೇ ಇವೆ. ಇನ್ನೂ ಹೆಚ್ಚಿನ ನಿಯಮಗಳನ್ನು ಪರಿಗಣಿಸಲಾಗುತ್ತಿದೆ'ಎಂದು ಹೇಳಿದ್ದಾರೆ.
ಕೇಂದ್ರದ ಮಾಜಿ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಸಲ್ಲಿಸಿದ್ದ ಪಿಐಎಲ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ಕೇಂದ್ರ ಸರ್ಕಾರ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಉಲ್ಲು, ಎಎಲ್‌ಟಿಟಿ, ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಇತರರಿಂದ ಪ್ರತಿಕ್ರಿಯೆಯನ್ನು ಕೋರಿ ನೋಟಿಸ್ ಜಾರಿ ಮಾಡಿದೆ.
'ಓಟಿಟಿ ವೇದಿಕೆಗಳಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರದ ಬಗ್ಗೆ ನಿಜವಾದ ಕಳವಳವಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್‌ಗಳು ಯಾವುದೇ ನಿರ್ಬಂಧವಿಲ್ಲದೆ ಪ್ರಸಾರವಾಗುತ್ತಿವೆ. ಎಂತಹ ಕಂಟೆಂಟ್‌ಗಳ ಪ್ರಸಾರ ಮಾಡಲಾಗಿದೆ ಎಂಬುದರ ಪಟ್ಟಿಯನ್ನು ನಾನು ನೀಡಿದ್ದೇನೆ' ಎಂದು ಮಹೂರ್ಕರ್ ಪರ ಹಾಜರಿದ್ದ ವಕೀಲ ವಿಷ್ಣುಶಂಕರ ಜೈನ್ ಹೇಳಿದ್ದಾರೆ.




