ಸುಮಿ: ಉಕ್ರೇನ್‌ನ ಈಶಾನ್ಯ ಭಾಗದ ಪ್ರಮುಖ ನಗರವಾದ 'ಸುಮಿ' ಮೇಲೆ ರಷ್ಯಾ ಪಡೆಗಳು ಭಾನುವಾರ ಖಂಡಾಂತರ ಕ್ಷಿಪಣಿ ದಾಳಿ ಮಾಡಿವೆ.
ರಷ್ಯಾ ಗಡಿ ಸಮೀಪ ಇರುವ ಸುಮಿ ನಗರದ ಹೃದಯ ಭಾಗದಲ್ಲೇ ಈ ಭೀಕರ ದಾಳಿ ನಡೆದಿದ್ದು ಪರಿಣಾಮವಾಗಿ ಮಹಿಳೆಯರು, ಮಕ್ಕಳು ಸೇರಿ 32 ಜನ ಮೃತಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ.
ಭಾನುವಾರ ಉಕ್ರೇನ್‌ನಲ್ಲಿ ಪಾಮ್ ಸಂಡೇಯ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆಯೇ ಈ ಭೀಕರ ದಾಳಿಯಾಗಿದ್ದು ಉಕ್ರೇನಿಗರನ್ನು ಕೆರಳುವಂತೆ ಮಾಡಿದೆ. ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ "Only bastards do this'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಈ ದಾಳಿಯನ್ನು ಯುರೋಪ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಖಂಡಿಸಿದ್ದಾರೆ. ಮಹಿಳೆ, ಮಕ್ಕಳನ್ನು, ಅಮಾಯಕರನ್ನು ಕೊಲ್ಲುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಜಾಗತಿಕ ನಾಯಕರೆಲ್ಲ ಒಂದಾಗಿ ರಷ್ಯಾದ ಮೇಲೆ ಒತ್ತಡ ಹೇರಿ ಯುದ್ಧ ನಿಲ್ಲಿಸಿ ಎಂದು ಝೆಲೆನ್‌ಸ್ಕಿ ಮತ್ತೊಮ್ಮೆ ಆಗ್ರಹಿಸಿದ್ದಾರೆ.




