ಕಾಠ್ಮಂಡು: ನೇಪಾಳದ ಪರ್ಸಾ ಜಿಲ್ಲೆಯ ಬೀರಗಂಜ್‌ನಲ್ಲಿ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಸಂಘರ್ಷ ಉಂಟಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
'ಬೀರಗಂಜ್ ಪುರಸಭೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 7.30ರಿಂದ ಭಾನುವಾರ ಮಧ್ಯಾಹ್ನದವರೆಗೆ ಕರ್ಫ್ಯೂ ವಿಧಿಸಲಾಗಿತ್ತು.
ಆ ಬಳಿಕ ಕರ್ಫ್ಯೂವನ್ನು ವಿಸ್ತರಿಸಲಾಗಿದೆ' ಎಂದು ಪರ್ಸಾ ಜಿಲ್ಲಾಡಳಿತವು ಭಾನುವಾರ ತಿಳಿಸಿದೆ.
'ಹನುಮನ ಮೂರ್ತಿಯ ಮೆರವಣಿಗೆ ಬೀರಗಂಜ್‌ನ ಘಂಟಾಗರ್‌ನಿಂದ ಆರಂಭವಾಗಿ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಾಗಿದೆ. ಈ ವೇಳೆ ಕೆಲವು ದುಷ್ಕರ್ಮಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಪೊಲೀಸರು ಒಳಗೊಂಡಂತೆ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




