HEALTH TIPS

ಹಿಂಸಾಚಾರ: ಮುರ್ಶಿದಾಬಾದ್‌ ತೊರೆಯುತ್ತಿರುವ ಜನ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಕೋಮು ಹಿಂಸಾಚಾರದಿಂದ ತೊಂದರೆಗೆ ಒಳಗಾದ ನೂರಾರು ಮಂದಿ ಭಾಗೀರಥಿ ನದಿಯನ್ನು ದಾಟಿ, ನೆರೆಯ ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗೆ ಬರುತ್ತಿರುವವರಿಗೆ ಸ್ಥಳೀಯ ಆಡಳಿತವು ಶಾಲೆಗಳಲ್ಲಿ ಆಶ್ರಯ ಮತ್ತು ಆಹಾರ ಒದಗಿಸಿದೆ.

ದೋಣಿಗಳನ್ನು ಬಳಸಿ ನದಿ ದಾಟುತ್ತಿರುವವರಿಗೆ ಸಹಾಯ ಒದಗಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ವಕ್ಫ್‌ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಮುಸ್ಲಿಂ ಬಾಹುಳ್ಯದ ಮುರ್ಶಿದಾಬಾದ್‌, ಸೂತಿ, ಧುಲಿಯಾನ್, ಜಂಗೀಪುರ ಮತ್ತು ಶಂಶೇರ್‌ಗಂಜ್‌ ಪ್ರದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆಗಳು ಕೋಮು ಹಿಂಸಾಚಾರವಾಗಿ ಪರಿವರ್ತನೆ ಕಂಡಿವೆ. ಇದರಿಂದಾಗಿ ಜನ ಬೇರೆಡೆ ತೆರಳುತ್ತಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

'ನಮ್ಮ ಮನೆಗಳಿಗೆ ಬೆಂಕಿ ಹಾಕಲಾಯಿತು, ಹೊರಗಿನವರು ಹಾಗೂ ಸ್ಥಳೀಯರು ಸೇರಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ಹೀಗಾಗಿ ಧುಲಿಯಾನ್‌ನ ಮಂದಿರ್‌ಪಾರಾ ಪ್ರದೇಶದಿಂದ ತಪ್ಪಿಸಿಕೊಂಡು ಬರಬೇಕಾಯಿತು' ಎಂದು ಕುಟುಂಬದ ನಾಲ್ಕು ಜನರ ಜೊತೆ ಬಂದಿರುವ ಯುವತಿಯೊಬ್ಬರು ಹೇಳಿದರು.

'ಅವರು ಬಾಂಬ್ ಎಸೆದರು, ವಕ್ಫ್‌ ಕಾಯ್ದೆಗಾಗಿ ನಮ್ಮನ್ನು ದೂಷಿಸಿದರು. ನಮ್ಮ ಮನೆಗಳನ್ನು ತಕ್ಷಣವೇ ತೊರೆಯುವಂತೆ ಸೂಚಿಸಿದರು. ನಮ್ಮ ಮನೆಯ ಗಂಡಸರನ್ನು ಥಳಿಸಿದರು. ಜೀವಭಯದಿಂದಾಗಿ ನಾವು ಕೇಂದ್ರೀಯ ಪಡೆಗಳ ಸಹಾಯದಿಂದ ಪಾರಾಗಿ ಬಂದೆವು' ಎಂದು ಅವರು ವಿವರಿಸಿದರು.

'ನಾವು ತಪ್ಪು ಮಾಡದಿದ್ದರೂ ಲೂಟಿಕೋರರ ಮುಂದೆ ಕೈಮುಗಿದು ಕ್ಷಮೆ ಯಾಚಿಸಿದೆವು. ಆಯುಧಗಳನ್ನು ಝಳಪಿಸುತ್ತಿದ್ದ ಅವರು ಬಹಳಷ್ಟು ದೌರ್ಜನ್ಯ ಎಸಗಿದರು. ನಾನು, ನನ್ನ ಮಗ, ಸೊಸೆ ಮತ್ತು ಮೊಮ್ಮಗ ನಮ್ಮ ಒಂದಿಷ್ಟು ವಸ್ತುಗಳೊಂದಿಗೆ ಪಾರಾಗಿ ಬಂದೆವು. ಇಲ್ಲದಿದ್ದರೆ ನಮ್ಮ ಹತ್ಯೆಯಾಗುತ್ತಿತ್ತು' ಎಂದು ಮಹಿಳೆಯೊಬ್ಬರು ವಿವರಿಸಿದರು.

Highlights - null

ಅಮಿತ್‌ ಶಾಗೆ ಪತ್ರ

ಪಶ್ಚಿಮ ಬಂಗಾಳದ ಗಡಿಯಲ್ಲಿ ಇರುವ ಕೆಲವು ಜಿಲ್ಲೆಗಳನ್ನು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಿ) ಕಾಯ್ದೆಯ ಅಡಿಯಲ್ಲಿ 'ಪ್ರಕ್ಷುಬ್ಧ ಪ್ರದೇಶಗಳು' ಎಂದು ಘೋಷಿಸುವಂತೆ ಕೋರಿ ಪುರುಲಿಯಾ ಕ್ಷೇತ್ರದ ಬಿಜೆಪಿ ಸಂಸದ ಜ್ಯೋತಿರ್ಮಯಿ ಸಿಂಗ್ ಮಹತೊ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ಮತ್ತೆ ಮತ್ತೆ ದಾಳಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

'400 ಮಂದಿ ಓಡಿಹೋಗಿದ್ದಾರೆ'

ಹಿಂಸಾಚಾರದ ನಂತರ 400 ಮಂದಿ ಧುಲಿಯಾನ್‌ನಿಂದ ಬೇರೆಡೆ ಓಡಿಹೋಗಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. 'ಧುಲಿಯಾನ್ ಮುರ್ಶಿದಾಬಾದ್‌ನ 400ಕ್ಕೂ ಹೆಚ್ಚು ಮಂದಿ ಹಿಂದೂಗಳು ಮತಾಂಧರ ಭೀತಿಯಿಂದಾಗಿ ನದಿ ದಾಟಿ ಓಡಿಹೋಗಿದ್ದಾರೆ... ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ದೌರ್ಜನ್ಯ ನಿಜವಾಗಿದೆ' ಎಂದು ಅವರು ಹೇಳಿದ್ದಾರೆ. 'ಟಿಎಂಸಿಯ ತುಷ್ಟೀಕರಣ ರಾಜಕೀಯವು ಮೂಲಭೂತವಾದಿಗಳಿಗೆ ಧೈರ್ಯ ತಂದುಕೊಟ್ಟಿದೆ. ಹಿಂದೂಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ನಮ್ಮ ಜನರು ಅವರದೇ ನಾಡಿನಲ್ಲಿ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹೀಗೆ ಕುಸಿಯುವಂತೆ ಮಾಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು' ಎಂದು ಅವರು 'ಎಕ್ಸ್‌' ಮೂಲಕ ಹೇಳಿದ್ದಾರೆ. ಮೊದಮೊದಲು ಕೆಲವರು ಮಾತ್ರ ದೋಣಿಗಳಲ್ಲಿ ಬರುತ್ತಿದ್ದರು. ಆದರೆ ಶುಕ್ರವಾರ ಮಧ್ಯಾಹ್ನದ ನಂತರ ಅವರ ಸಂಖ್ಯೆ ಹೆಚ್ಚಾಗಿದೆ ಎಂದು ದೇವನಾಪುರ-ಸೋವಾಪುರ ಗ್ರಾಮ ಪಂಚಾಯಿತಿಯ ಪ್ರಧಾನರಾದ ಸುಲೇಖಾ ಚೌಧರಿ ತಿಳಿಸಿದರು. 'ಶನಿವಾರದವರೆಗೆ ಬಂದವರ ಸಂಖ್ಯೆಯು 500ನ್ನು ದಾಟಿದೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು' ಎಂದು ಅವರು ಹೇಳಿದರು. ದೋಣಿಗಳಲ್ಲಿ ಬರುತ್ತಿರುವವರಿಗೆ ನೆರವು ನೀಡಲು 20 ಮಂದಿ ಯುವಕರನ್ನು ನಿಯೋಜಿಸಲಾಗಿದೆ ಎಂದು ಟಿಎಂಸಿ ಶಾಸಕಿ ಚಂದನಾ ಸರ್ಕಾರ್ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries