ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರ (ಎಫ್ಪಿಐ)ರು ಎಪ್ರಿಲ್ ಪೂರ್ವಾರ್ಧದಲ್ಲಿ ಭಾರತೀಯ ಶೇರುಪೇಟೆಯಿಂದ 33,927 ಕೋಟಿ ರೂ.ನಿವ್ವಳ ಮೊತ್ತದ ಹೂಡಿಕೆಯನ್ನು ಹಿಂದೆಗೆದುಕೊಂಡಿವೆ. ಇದರ ಪರಿಣಾಮವಾಗಿ ತಂತ್ರಜ್ಞಾನ ವಲಯದ ಶೇರುಗಳು ಕಳೆದೊಂದು ವರ್ಷದಲ್ಲಿ ಅತ್ಯಂತ ಕೆಟ್ಟ ಪಾಕ್ಷಿಕ ಹೊರಹರಿವಿನ ಬಿಸಿಯನ್ನು ಅನುಭವಿಸಿವೆ.
ಜಾಗತಿಕ ಸುಂಕಗಳಿಗೆ ಸಂಬಂಧಿಸಿದ ಅನಿಶ್ಚಿತತೆಯ ನಡುವೆ ಎಫ್ಪಿಐಗಳು 13,828 ಕೋಟಿ ರೂ.ಮೌಲ್ಯದ ತಂತ್ರಜ್ಞಾನ ಕಂಪೆನಿಗಳ ಶೇರುಗಳನ್ನು ಹಾಗೂ ಹಣಕಾಸು ಸೇವೆ ಮತ್ತು ಬಂಡವಾಳ ಸರಕು ವಲಯಗಳಲ್ಲಿ ಅನುಕ್ರಮವಾಗಿ 4,501 ಕೋಟಿ ರೂ.ಮತ್ತು 3,019 ಕೋಟಿ ರೂ.ಮೌಲ್ಯದ ಶೇರುಗಳನ್ನು ಮಾರಾಟ ಮಾಡಿವೆ.
ಇದರ ಜೊತೆಗೆ ಎಪ್ರಿಲ್ ಪೂರ್ವಾರ್ಧದಲ್ಲಿ ನಿಫ್ಟಿ 50 ಸೂಚ್ಯಂಕದಲ್ಲಿ ಶೇ.0.8ರಷ್ಟು ಏರಿಕೆಯಾಗಿದ್ದರೆ ನಿಫ್ಟಿ ಐಟಿ ಸೂಚ್ಯಂಕವು ಶೇ.7.5ರಷ್ಟು ಕುಸಿತವನ್ನು ದಾಖಲಿಸಿದೆ.
ಜಾಗತಿಕ ವ್ಯಾಪಾರ ಉದ್ವಿಗ್ನತೆಗಳು ಮತ್ತು ಅಮೆರಿಕವು ಪ್ರಕಟಿಸಿರುವ ಪ್ರತಿಸುಂಕಗಳ ನಡುವೆ ಈ ಮಾರಾಟಗಳು ನಡೆದಿವೆ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರು ಪ್ರತಿಸುಂಕ ಹೇರಿಕೆಗೆ 90 ದಿನಗಳ ವಿರಾಮವನ್ನು ಹಾಗೂ ಸ್ಮಾರ್ಟ್ಪೋನ್ಗಳು ಮತ್ತು ಕಂಪ್ಯೂಟರ್ ಗಳಂತಹ ವಿದ್ಯುನ್ಮಾನ ಸಾಧನಗಳಿಗೆ ವಿನಾಯಿತಿಗಳನ್ನು ಘೋಷಿಸಿರುವುದು ಶೇರುಪೇಟೆಗಳು ಚೇತರಿಸಿಕೊಳ್ಳಲು ಕಾರಣವಾಗಿದೆ.
ಇನ್ನೊಂದೆಡೆ ಎಫ್‌ಎಮ್ಜಿಸಿ, ವಿದ್ಯುತ್ ಮತ್ತು ಮಾಧ್ಯಮ ವಲಯಗಳ ಶೇರುಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು, ಎಫ್ಪಿಐಗಳು ದೂರಸಂಪರ್ಕ ಕಂಪೆನಿಗಳ 2,137 ಕೋಟಿ ರೂ. ಮತ್ತು ಎಫ್‌ಎಂಜಿಸಿ ಕಂಪೆನಿಗಳ 587 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿವೆ.




