ನವದೆಹಲಿ: ಭಾರತವು ಪರಮಾಣು ಜವಾಬ್ದಾರಿ ಕಾನೂನುಗಳನ್ನು ಸಡಿಲಗೊಳಿಸಲು ಯೋಜನೆ ಹಾಕಿಕೊಂಡಿದೆ. ಅಮೆರಿಕದ ಕಂಪನಿಗಳ ಹೂಡಿಕೆ ಆಕರ್ಷಿಸುವ ಉದ್ದೇಶ ಹೊಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ನರೇಂದ್ರ ಮೋದಿ ಸರ್ಕಾರದ ಈ ಪ್ರಸ್ತಾವನೆಯು 2047ರ ಸುಮಾರಿಗೆ ಪರಮಾಣು ಶಕ್ತಿ ಉತ್ಪಾದನೆಯನ್ನು 12 ಪಟ್ಟು ಅಂದರೆ 100 ಗಿಗಾವ್ಯಾಟ್ಗೆ ವಿಸ್ತರಿಸುವ ಮತ್ತು ಅಮೆರಿಕದೊಂದಿಗಿನ ಸುಂಕ-ವ್ಯಾಪಾರದ ಮಾತುಕತೆಗಳಿಗೆ ಚೈತನ್ಯ ಒದಗಿಸುವ ಇತ್ತೀಚಿನ ಕ್ರಮವಾಗಿದೆ ಎಂದು ವಿಶ್ಲೇಷಿಸಲಾಗಿದೆ.
2010ರ ಸಿವಿಲ್ ನ್ಯೂಕ್ಲಿಯರ್ ಲಯಬಿಲಿಟಿ ಡ್ಯಾಮೇಜ್ ಆಕ್ಟ್ನಲ್ಲಿ ಸರಬರಾಜುದಾರರನ್ನು ಅಪಘಾತಗಳಿಗೆ ಅನಿಯಮಿತ ಜವಾಬ್ದಾರಿಗೆ ಒಡ್ಡುವ ಪ್ರಮುಖ ಷರತ್ತನ್ನು ಪರಮಾಣು ಶಕ್ತಿ ಇಲಾಖೆ ರೂಪಿಸಿರುವ ಕರಡು ಕಾನೂನು ತೆಗೆದುಹಾಕಲಿದೆ ಎಂದು ಮೂಲಗಳು ತಿಳಿಸಿವೆ.
ಏಕೆ ತಿದ್ದುಪಡಿ?
ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಸರಬರಾಜುದಾರರ ಬದಲಿಗೆ ಆಪರೇಟರುಗಳ ಮೇಲಿಡುವ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಈ ತಿದ್ದುಪಡಿ ಸಮನಾದುದು ಎನ್ನಲಾಗಿದೆ. ಆದರೆ ಈ ಕುರಿತು ಪರಮಾಣು ಶಕ್ತಿ ಇಲಾಖೆ, ಪ್ರಧಾನಮಂತ್ರಿ ಕಚೇರಿ ಅಥವಾ ಹಣಕಾಸು ಸಚಿವಾಲಯದಿಂದ ಮಾಧ್ಯಮಗಳಿಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅಪಘಾತಗಳ ಸಂದರ್ಭದಲ್ಲಿ ಅನಿಯಮಿತ ಅಪಾಯಗಳ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳಾದ ಜನರಲ್ ಎಲೆಕ್ಟ್ರಿಕ್ ಕಂ. ಮತ್ತು ವೆಸ್ಟಿಂಗ್ಹೌಸ್ ಎಲೆಕ್ಟ್ರಿಕ್ ಕಂ. ಕೆಲವು ವರ್ಷಗಳಿಂದ ಸುಮ್ಮನಿವೆ.
ಈ ಉದ್ದೇಶಿತ ತಿದ್ದುಪಡಿಯು ಇಂಥ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಈ ವರ್ಷ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಈ ತಿದ್ದುಪಡಿ ಕಾನೂನಿನ ಅಂಗೀಕಾರವು ನಿರ್ಣಾಯಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜುಲೈನಲ್ಲಿ ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿಗಳಿಗೆ ಅನುಮೋದನೆ ಪಡೆಯುವ ವಿಶ್ವಾಸವನ್ನು ಮೋದಿ ಆಡಳಿತ ಹೊಂದಿದೆ ಎಂದೂ ಮೂಲಗಳು ತಿಳಿಸಿವೆ.




