ಪೆರ್ಲ: ಕವಿತೆ ಎನ್ನುವುದು ಕವಿ, ಓದುಗ, ಕೇಳುಗ, ವಿಮರ್ಶಕ ಸಹಿತ ಎಲ್ಲರಿಗೂ ಕೌತುಕದ ಎತ್ತರವಾಗಿದೆ. ಅದೊಮದು ವಿಸ್ಮಯವಾಗಿದ್ದು, ದೇವರ ನಂತರ ಆ ವಿಶೇಷಣೆಗೆ ಇರುವ ವಸ್ತು ಕಾವ್ಯ ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಪೆರ್ಲ ವ್ಯಾಪಾರಿ ಭವನದಲ್ಲಿ ಶನಿವಾರ ಅಪರಾಹ್ನ ನಡೆದ ಕವಿತಾ ಕೌತುಕ ಸರಣಿ-3 ಕವಿ ಕಾವ್ಯ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ ಆದಿಯಲ್ಲಿ ಜನಜೀವನದ ಪ್ರತಿಬಿಂಬವೂ, ಗತಿಬಿಂಬವೂ ಆಗಿದ್ದು, ಯೋಧ, ವ್ಯಾಧ ನ್ಯಾಯಗಳ ಸಮ್ಮಿಲನವೇ ಕವಿತೆ ಎಂದರು. ಜೀವಗಳು ಹುಟ್ಟುವ ಹಾಗೆ ಪ್ರಕೃತಿ-ಪುರುಷರ ಸಂಯೋಗದಂತೆ ಪಾಂಡಿತ್ಯ ಪ್ರತಿಭಾ ಸಂಪನ್ನತೆಯಿಂದ ಕಾವ್ಯ ಸಮೃದ್ದತೆ ಪಡೆಯುತ್ತದೆ. ಕವಿತೆ ಕನವರಿಕೆಗಳ ಅಕ್ಷರ ತೋರಣಗಳಾಗಿ ಸಮಾಜವನ್ನು ವರ್ತಮಾನದೊಡನೆ ಮುನ್ನಡೆಸುತ್ತದೆ. ಭಾಷೆ, ಸಂಸ್ಕøತಿಯ ಬೆಳವಣಿಗೆ, ಸಮೃದ್ಧ ವಾಙ್ಮಯ ಸಂಪತ್ತು ಬೆಳೆಯಲು ಸಾಹಿತ್ಯದ ಕೊಡುಗೆ ಅಪಾರ ಎಂದವರು ತಿಳಿಸಿದರು.
ನಿವೃತ್ತ ಶಿಕ್ಷಕ ಉಮೇಶ್ ಕೆ.ಪೆರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರವಣಿಗೆಯನ್ನು ಮರೆತವರಿಗೆ ಮತ್ತೆ ಲೇಖನಿ ಹಿಡಿಸುವ ಶಕ್ತಿ ಸಾಮೂಹಿಕ ಸಾಹಿತ್ಯ ಚಟುವಟಿಕೆಗಳಿದೆ. ಜನರನ್ನು ಒಗ್ಗೂಡಿಸಿ ಭಾಷಾ ಚಳುವಳಿಗೆ ನಿತ್ಯ ಹಚ್ಚಿಕೊಳ್ಳುವ ಸಾಹಿತ್ಯಪರ ಗೋಷ್ಠಿಗಳು ಇಂದಿನ ತುರ್ತು ಅಗತ್ಯ ಎಂದರು.
ಸವಿಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಬಳಿಕ ನಡೆದ ಕವಿ ಕಾವ್ಯ ಸಂವಾದದಲ್ಲಿ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಂಯೋಜಕರಾಗಿ ಸಂವಾದ ನಡೆಸಿ ಮಠಾತನಾಡಿ, ಏಕಾಂತತೆಯಲ್ಲಿ ಹುಟ್ಟುವ ಕಾವ್ಯ ಜನಪರವೂ ಜನಮುಖಿಯಾಗಿ ಲೋಕಾಂತರವಾಗುತ್ತದೆ. ಸಾರ್ವಕಾಲಿಕ ಮೌಲ್ಯಗಳೊಂದಿಗೆ ಧ್ವನಿಸುವ ಕಾವ್ಯ ಅಭಿವ್ಯಕ್ತಿಯ ಜ್ಞಾನ ಪರಂಪರೆಯ ಮುಖ್ಯ ಭೂಮಿಕೆ ಎಂದರು.
ಕವಿಗಳಾದ ಎಸ್.ಎನ್.ಭಟ್ ಸೈಪಂಗಲ್ಲು, ವೆಂಕಟ್ ಭಟ್ ಎಡನೀರು, ಸುಂದರ ಬಾರಡ್ಕ, ದೀಕ್ಷಾ ಕೆಜಕ್ಕಾರು, ಹರೀಶ್ ಪೆರ್ಲ, ನಳಿನಿ ಸೈಪಂಗಲ್ಲು, ಗ್ರೀಷ್ಮ ಬಳ್ಳ, ನಿರ್ಮಲ ಸೇಸಪ್ಪ ಖಂಡಿಗೆ, ಆನಂದ ರೈ ಅಡ್ಕಸ್ಥಳ, ವಿಜಯ ಕಾನ, ದೀಕ್ಷಾ ಎಸ್.ಪಿ., ಹರ್ಷಿತಾ ಪಿ., ಪ್ರೇಮಾ ಶೆಟ್ಟಿ, ರಿಷಾ ಪೆರ್ಲ,ದಯಾನಂದ ರೈ ಕಳ್ವಾಜೆ, ಹರೀಶ್ ಮಾಸ್ತರ್,ಶಶಿಕಲಾ, ನಳಿನಿ ಭಾಗವಹಿಸಿದ್ದರು. ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ, ಮಂಜುಶ್ರೀ ನಲ್ಕ ನಿರೂಪಿಸಿದರು. ಆಯಿಷಾ ಎ.ಎ. ಪೆರ್ಲ ಉಪಸ್ಥಿತರಿದ್ದರು. ಈ ಸಂದರ್ಭ ಪಹಲ್ಗಾಮ್ ನರಮೇಧದಲ್ಲಿ ಮೃತಪಟ್ಟ ನಾಗರಿಕರಿಗೆ ಭಾಷ್ಪಾಂಜಲಿ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

.jpg)
.jpg)


