HEALTH TIPS

ಇರಾನ್‌ ಬಂದರಿನಲ್ಲಿ ಭಾರಿ ಸ್ಫೋಟ | ನಾಲ್ವರ ಸಾವು: 500ಕ್ಕೂ ಹೆಚ್ಚು ಜನರಿಗೆ ಗಾಯ

ದುಬೈ: ಇರಾನ್‌ನ ದಕ್ಷಿಣ ಭಾಗದಲ್ಲಿರುವ ಬಂದರ್‌ ಅಬ್ಬಾಸ್‌ ನಗರದ ಶಾಹಿದ್‌ ರಜಯೀ ಬಂದರಿನಲ್ಲಿ ಶನಿವಾರ ಭಾರಿ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 516 ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಶಾಹಿದ್‌ ರಜಯೀ, ಇರಾನ್‌ನ ಅತ್ಯಂತ ದೊಡ್ಡ ಬಂದರು.

ರಾಸಾಯನಿಕಗಳಿದ್ದ ಕಂಟೇನರ್‌ಗಳನ್ನು ಸಂಗ್ರಹಿಸಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. 'ಈ ಪ್ರದೇಶದಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ರಾಸಾಯನಿಕ ಇದ್ದ ಕಂಟೇನರ್‌ಗಳಿಗೆ ಬೆಂಕಿ ವ್ಯಾಪಿಸಿತು. ಇದರಿಂದ ಸ್ಫೋಟ ಸಂಭವಿಸಿದೆ' ಎಂದು ಬಂದರಿನ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುಮಾರು 50 ಕಿ.ಮೀ ದೂರದವರೆಗೆ ಪರಿಣಾಮ ಕಾಣಿಸಿಕೊಂಡಿದೆ. ಭೂಮಿ ನಡುಗಿದ ಅನುಭವವಾಗಿದೆ. ಬಂದರು ಪ್ರದೇಶದಲ್ಲಿದ್ದ ಕಟ್ಟಡಗಳ ಕಿಟಕಿ ಗಾಜುಗಳು ಒಡೆದಿವೆ. ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಸಮೀಪದ ರಸ್ತೆಗಳಲ್ಲಿದ್ದವರು ಗಾಯಗೊಂಡಿದ್ದಾರೆ.

'ಬಂದರ್‌ ಅಬ್ಬಾಸ್‌ ತೈಲ ಘಟಕಗಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಘಟಕಗಳು ತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ' ಎಂದು ಇರಾನ್‌ನ ಸರ್ಕಾರಿ ತೈಲ ಉತ್ಪನ್ನ ವಿತರಣಾ ಕಂಪನಿ ಹೇಳಿದೆ. ಇರಾನ್‌ನ ಆಂತರಿಕ ಸಚಿವಾಲಯವು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ.

'ಚೀನಾದಿಂದ ಬಂದಿದ್ದ ರಾಕೆಟ್‌ ಇಂಧನ'

ಅಣ್ವಸ್ತ್ರ ತಯಾರಿಕೆಯಲ್ಲಿ ಇರಾನ್‌ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗಿರುವ ಬಗ್ಗೆ ಒಮಾನ್‌ನಲ್ಲಿ ಇರಾನ್‌ ಹಾಗೂ ಅಮೆರಿಕವು ಶನಿವಾರ ಮೂರನೇ ಸುತ್ತಿನ ಮಾತುಕತೆ ನಡೆಸಿದೆ. ಇದೇ ಹೊತ್ತಿನಲ್ಲಿ ಈ ಸ್ಫೋಟ ಸಂಭವಿಸಿದೆ. ಇಸ್ರೇಲ್‌ ವಿರುದ್ಧ ಬಳಸುವ ರಾಕೆಟ್‌ಗಳಿಗೆ ಮರುಪೂರಣ ಮಾಡಲು ಚೀನಾದಿಂದ ಇಂಧನವನ್ನು ತರಿಸಿಕೊಳ್ಳಲಾಗಿತ್ತು. ಈ ಇಂಧನ ಸಂಗ್ರಹಗಾರದಲ್ಲಿಯೇ ಸ್ಫೋಟ ಸಂಭವಿಸಿದೆ.

ರಾಸಾಯನಿಕ ಸಂಗ್ರಹದ ಬಳಿ ಬೆಂಕಿ ಕಾಣಿಸಿಕೊಂಡು ಬಳಿಕ ಸ್ಫೋಟ ಸಂಭವಿಸಿದೆ ಎಂದು ಬಂದರು ಅಧಿಕಾರಿಗಳು ಹೇಳುತ್ತಿದ್ದರೂ ಸ್ಫೋಟದ ಬಗ್ಗೆ ನಿಖರ ಮಾಹಿತಿಯನ್ನು ಇರಾನ್‌ ಹೇಳಿಲ್ಲ. ಇದರಿಂದಾಗಿ ಹಲವು ಪ್ರಶ್ನೆಗಳು ಎದ್ದಿವೆ. 'ಚೀನಾದಿಂದ ಮಾರ್ಚ್‌ನಲ್ಲಿಯೇ ಇಂಧನವಿದ್ದ ಕಂಟೇನರ್‌ಗಳು ಇರಾನ್‌ ತಲುಪಿವೆ. ಆದರೂ ಇರಾನ್‌ ಈ ಕಂಟೇನರ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರಲಿಲ್ಲ' ಎಂದು ಖಾಸಗಿ ಭದ್ರತಾ ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries