ಇಸ್ಲಾಮಾಬಾದ್: 'ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಲು ಭಾರತವು ಮುಂದಾದರೆ ರಕ್ತಪಾತವಾಗಲಿದೆ' ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಬೆದರಿಕೆ ಹಾಕಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
'ಸಿಂಧೂ ನದಿ ನೀರು ನಮಗೆ ಸೇರಿದ್ದು ಮತ್ತು ಅದು ಎಂದೆಂದಿಗೂ ನಮ್ಮದೇ ಆಗಿರುತ್ತದೆ. ನಮ್ಮ ಪಾಲಿನ ನೀರು ಅದರ ಮೂಲಕ ಹರಿಯುವುದೋ ಅಥವಾ ಅವರ ರಕ್ತ ಹರಿಯುವುದೋ ಎಂಬುದು ಮುಂದೆ ನಿರ್ಧಾರವಾಗಲಿದೆ' ಎಂದು ಸಿಂಧ್ ಪ್ರಾಂತ್ಯದ ಸುಕೂರ್ ಪ್ರದೇಶದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಲಾವಲ್ ಹೇಳಿದ್ದಾಗಿ 'ದಿ ನ್ಯೂಸ್' ವರದಿ ಮಾಡಿದೆ.
'ಸಿಂಧೂ ನದಿ ಈ ಪ್ರಾಂತ್ಯದ ಮೂಲಕ ಹರಿಯುತ್ತದೆ ಮತ್ತು ಮೊಹೆಂಜೊ ದಾರೊ ನಾಗರಿಕತೆಯು ಸಿಂಧೂ ನದಿ ಪಾತ್ರದಲ್ಲಿ ಮೈದಳೆದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ನಾಗರಿಕತೆಯು ಭಾರತಕ್ಕೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಆದರೆ, ಈ ನಾಗರಿಕತೆಯು ಲಡ್ಕಾನಾದ ಮೊಹೆಂಜೊ ದಾರೊದಲ್ಲಿದೆ. ಅದರ ನೈಜ ಮಾಲೀಕರು ನಾವೇ ಆಗಿದ್ದೇವೆ ಮತ್ತು ಅದನ್ನು ರಕ್ಷಿಸುತ್ತೇವೆ' ಎಂದಿದ್ದಾರೆ.
'ಭಾರತ ಸರ್ಕಾರವು ಪಾಕಿಸ್ತಾನದ ನೀರಿನ ಮೇಲೆ ಕಣ್ಣಿಟ್ಟಿದೆ. ನಮ್ಮ ಪಾಲಿನ ನೀರನ್ನು ರಕ್ಷಿಸಲು ಪಾಕಿಸ್ತಾನದ ನಾಲ್ಕೂ ಪ್ರಾಂತ್ಯಗಳ ಜನರು ಒಗ್ಗಟ್ಟು ಪ್ರದರ್ಶಿಸಬೇಕು' ಎಂದು ಕರೆಕೊಟ್ಟರು.
'ಮೋದಿ ಅವರ 'ಯುದ್ಧೋನ್ಮಾದ' ಮನಃಸ್ಥಿತಿ ಮತ್ತು ಸಿಂಧೂ ನದಿ ನೀರನ್ನು ಬೇರೆಡೆ ತಿರುಗಿಸುವ ಯಾವುದೇ ಪ್ರಯತ್ನವನ್ನು ಪಾಕಿಸ್ತಾನದ ಜನರು ಅಥವಾ ಅಂತರರಾಷ್ಟ್ರೀಯ ಸಮುದಾಯವು ಸಹಿಸುವುದಿಲ್ಲ. ಸಿಂಧೂ ನದಿ ನೀರಿಗೆ ತಡೆಯೊಡ್ಡುವುದನ್ನು ಒಪ್ಪಲಾಗದು ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸುತ್ತೇವೆ' ಎಂದು ಹೇಳಿದ್ದಾರೆ.
ಪಾಕಿಸ್ತಾನಿಗಳು ಸ್ವತಃ ಭಯೋತ್ಪಾದನೆಯ ಬಲಿಪಶುಗಳಾಗಿರುವುದರಿಂದ ಭಾರತದಲ್ಲಿ ಈಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಇಡೀ ದೇಶದ ಜನರು ಖಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಿಲಾವಲ್ ಭುಟ್ಟೊ ಪಿಪಿಪಿ ಅಧ್ಯಕ್ಷಸಿಂಧ್ ಪ್ರಾಂತ್ಯದ ಜನರ ಮತ್ತು ಸಿಂಧೂ ನದಿಯ ನಡುವಿನ ಶತಮಾನಗಳಷ್ಟು ಹಳೆಯ ಬಾಂಧವ್ಯವನ್ನು ಮೋದಿ ಅವರಿಗೆ ಮುರಿಯಲು ಸಾಧ್ಯವಿಲ್ಲಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ನಡೆಸುವ 'ತಟಸ್ಥ ಪಾರದರ್ಶಕ ಮತ್ತು ವಿಶ್ವಾಸಾರ್ಹ' ತನಿಖೆಗೆ ಸಹಕರಿಸಲು ತಮ್ಮ ದೇಶ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ. ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದರು. 'ನಮ್ಮ ಧೀರ ಸಶಸ್ತ್ರ ಪಡೆಗಳು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಸಮರ್ಥವಾಗಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿವೆ' ಎಂದು ಅಬೋಟಾಬಾದ್‌ನಲ್ಲಿ ನಡೆದ ಮಿಲಿಟರಿ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.




