HEALTH TIPS

ನಕಲಿ ‌ಹೃದ್ರೋಗ ತಜ್ಞರಿಂದ ಚಿಕಿತ್ಸೆ ಪಡೆದ 7 ಮಂದಿ ಸಾವು: ತನಿಖೆಗೆ NHRC ಆದೇಶ

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞರಿಂದ ಚಿಕಿತ್ಸೆ ಪಡೆದ 7 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ತನಿಖೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವು ಏಪ್ರಿಲ್ 7 ರಿಂದ 9 ರವರೆಗೆ ದಾಮೋಹ್‌ನಲ್ಲಿ ಮೊಕ್ಕಾಂ ಹೂಡಲಿದೆ ಎಂದು ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ತಿಳಿಸಿದ್ದಾರೆ.

2025ರ ಜನವರಿ ಮತ್ತು ಫೆಬ್ರುವರಿ ನಡುವೆ, ದಾಮೋಹ್ ಮಿಷನ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದ ಕಾರಣ ಅನೇಕ ಜನ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 'ಡಾ.ಎನ್. ಜಾನ್ ಕ್ಯಾಮ್' ಎಂಬ ವ್ಯಕ್ತಿ ವಿದೇಶದಲ್ಲಿ ಶಿಕ್ಷಣ ಮತ್ತು ತರಬೇತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಆ ವ್ಯಕ್ತಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್. ಅವರು ಬ್ರಿಟನ್‌ನ ಪ್ರಸಿದ್ಧ ಹೃದ್ರೋಗ ತಜ್ಞ ಪ್ರೊಫೆಸರ್ ಜಾನ್ ಕ್ಯಾಮ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ರೋಗಿಗಳ ದಾರಿ ತಪ್ಪಿಸಿದ್ದಾರೆ. ಅವರಿಂದ ಚಿಕಿತ್ಸೆ ಪಡೆದ 7 ಜನ ಮೃತಪಟ್ಟಿದ್ದಾರೆ ಎಂದು ಜಬಲ್ಪುರ್ ನಾಕಾ ನಿವಾಸಿ ದೀಪಕ್ ತಿವಾರಿ ಎಂಬುವವರು ದೂರು ನೀಡಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ನರೇಂದ್ರ ವಿಕ್ರಮಾದಿತ್ಯ ಯಾದವ್, ಅವರು ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ 'ಡಾ. ಎನ್. ಜಾನ್ ಕ್ಯಾಮ್' ಎಂಬ ನಕಲಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರು ಎಂದೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

'ದಾಮೋಹ್‌ನ ಮಿಷನರಿ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಯ ಚಿಕಿತ್ಸೆಯ ಹೆಸರಿನಲ್ಲಿ ನಕಲಿ ವೈದ್ಯರೊಬ್ಬರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, 7 ಮಂದಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ' ಎಂದು ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸದರಿ ಮಿಷನರಿ ಆಸ್ಪತ್ರೆಯು ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಸರ್ಕಾರದ ಹಣವನ್ನು ಸಹ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ದೂರು ಬಂದಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದೂ ಅವರು ಹೇಳಿದ್ದಾರೆ.

ಪ್ರಕರಣದ ತನಿಖೆಗಾಗಿ ನನ್ನ ಆದೇಶದ ಮೇರೆಗೆ ರಚಿಸಲಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾ ತಂಡವು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ದಾಮೋಹ್‌ನಲ್ಲಿ ಮೊಕ್ಕಾಂ ಹೂಡಿ ತನಿಖೆ ನಡೆಸಲಿದೆ. ಸಂತ್ರಸ್ತರು ಅಥವಾ ಇತರ ಯಾವುದೇ ವ್ಯಕ್ತಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಬಯಸಿದರೆ, ಅವರು ದಾಮೋಹ್‌ನಲ್ಲಿ ತನಿಖಾ ತಂಡವನ್ನು ಭೇಟಿ ಮಾಡಬಹುದು ಎಂದು ಕನೂಂಗೊ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries