ನ್ಯೂಯಾರ್ಕ್: '2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿ ಸಾಧಿಸಬೇಕಾದರೆ ಮುಂದಿನ 10 ರಿಂದ 12 ವರ್ಷಗಳ ಕಾಲ ಪ್ರತೀ ವರ್ಷವೂ 80 ಲಕ್ಷ ಉದ್ಯೋಗಗಳನ್ನು ಭಾರತ ಸೃಷ್ಟಿಸಬೇಕಿದೆ. ಜತೆಗೆ ದೇಶದ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಹೆಚ್ಚಳವಾಗಬೇಕಿದೆ' ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಹೇಳಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ 'ಕೊಲಂಬಿಯಾ ಇಂಡಿಯಾ ಶೃಂಗಸಭೆ 2025' ಕಾರ್ಯಕ್ರಮದಲ್ಲಿ ನಾಗೇಶ್ವರನ್ ಭಾಗಿಯಾಗಿದ್ದರು. ಈ ವೇಳೆ 2047ರ ಗುರಿ ಸಾಧನೆಗೆ ಹಲವು ಸವಾಲುಗಳಿದ್ದು, ಮುಂದಿನ 10 ರಿಂದ 20 ವರ್ಷ ಕಠಿಣವಾಗಿರಲಿವೆ. ಆದರೂ ನಮ್ಮ ಗುರಿ ಸಾಧಿಸಲೇ ಬೇಕಿದೆ ಎಂದಿದ್ದಾರೆ.
ಅಲ್ಲದೇ, ಈಗಾಗಲೇ ಅಭಿವೃದ್ಧಿ ಹೊಂದಿರುವ ಹಲವು ರಾಷ್ಟ್ರಗಳು ತಮ್ಮ ಹಾದಿಯಲ್ಲಿ ನಿಭಾಯಿಸದಂತ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ರೊಬೋಟಿಕ್ಸ್ ರೀತಿಯ ಹಲವು ಸವಾಲುಗಳನ್ನು ಭಾರತ ಎದುರಿಸಬೇಕಿದೆ. ಜತೆಗೆ ತಂತ್ರಜ್ಞಾನ ಕೇಂದ್ರಿತ ಹಾಗೂ ಕಾರ್ಮಿಕ ಕೇಂದ್ರಿತ ನೀತಿ ನಿರೂಪಣೆಗಳ ನಡುವಿನ ಸಮಾನತೆಯನ್ನು ಕಾಯ್ದುಕೊಳ್ಳಬೇಕಿದೆ ಎಂದಿದ್ದಾರೆ.
ಭಾರತೀಯ ಉದ್ಯಮಗಳನ್ನು ಜಾಗತಿಕ ಸರಪಳಿಗೆ ಬೆಸೆಯುವುದು, ಜಾಗತಿಕ ಹೂಡಿಕೆಯ ಹೊರತಾಗಿ ಅಸ್ತಿತ್ವದಲ್ಲಿರುವ ಹೂಡಿಕೆಗಳ ಸಮರ್ಥ ಬಳಕೆ, ದೇಶಿಯ ನಾವೀನ್ಯತೆ, ವ್ಯಾಪಾರ ಕ್ಷೇತ್ರದಲ್ಲಿನ ಬಾಹ್ಯ ಸ್ಪರ್ಧಾತ್ಮಕತೆ ರೀತಿಯ ವಿಚಾರಗಳನ್ನೂ ನಿಭಾಯಿಸಬೇಕಿದೆ ಎಂದಿದ್ದಾರೆ.




