ನವದೆಹಲಿ: ಮಸೂದೆಗಳಿಗೆ ಅಂಗೀಕಾರ ಕುರಿತಂತೆ ತಮಿಳುನಾಡು ಸರ್ಕಾರದ ಅರ್ಜಿಗೆ ಸಂಬಂಧಿಸಿದ ನೀಡಿರುವ ತೀರ್ಪು, ಕೇರಳ ಸರ್ಕಾರ ಎತ್ತಿರುವ ಅಂಶಗಳಿಗೂ ಅನ್ವಯವಾಗಲಿದೆಯೇ ಎಂಬ ಅಂಶವನ್ನು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿತು.
ನ್ಯಾಯಮೂರ್ತಿಗಳಾ ಪಿ.ಎಸ್.ನರಸಿಂಹ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಕೇರಳ ಸರ್ಕಾರದ ಅರ್ಜಿಗಳನ್ನು ಮೇ 6ರಂದು ವಿಚಾರಣೆ ನಡೆಸಲಿದೆ.
ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡಲು ರಾಜ್ಯವಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಕೇರಳ ಸರ್ಕಾರ ಅರ್ಜಿ ಸಲ್ಲಿಸಿದೆ.
ಶಾಸನಸಭೆಗಳು ಅಂಗೀಕರಿಸಿ ಕಳುಹಿಸಿದ ಮಸೂದೆಗಳಿಗೆ ಅನುಮೋದನೆ ನೀಡುವ ಅಥವಾ ವಾಪಸು ಕಳುಹಿಸುವ ನಿರ್ಧಾರವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ರಾಜ್ಯಪಾಲರು ಕೈಗೊಳ್ಳಬೇಕು ಎಂದು ಕಾಲಮಿತಿ ನಿಗದಿಪಡಿಸಿ ನ್ಯಾಯಮೂರ್ತಿಗಳಾದ ಪಾರ್ದೀವಾಲಾ ಮತ್ತು ಆರ್.ಮಹದೇವನ್ ಅವರಿದ್ದ ಪೀಠ ಏ. 8ರಂದು ತೀರ್ಪು ನೀಡಿತ್ತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ತಮಿಳುನಾಡು ಅರ್ಜಿಗೆ ಸಂಬಂಧಿಸಿ ನೀಡಿರುವ ತೀರ್ಪು ಕೇರಳ ಸರ್ಕಾರ ಸಲ್ಲಿಸಿರುವ ಇಂತಹದೇ ಅರ್ಜಿಗೆ ಅನ್ವಯವಾಗುವುದಿಲ್ಲ ಎಂದು ಪೀಠದ ಗಮನಕ್ಕೆ ಇದಕ್ಕೂ ಮೊದಲು ತಂದರು.




