ಜಿನಿವಾ: ಈ ವರ್ಷದ ಜಾಗತಿಕ ವ್ಯಾಪಾರ ಬಗ್ಗೆ ಡಬ್ಲ್ಯುಟಿಒ ತನ್ನ ನಿರೀಕ್ಷೆ ತಗ್ಗಿಸಿದೆ. 'ಅಮೆರಿಕದ ಆಮದು ಸುಂಕ ಕ್ರಮಗಳು ಜಾಗತಿಕ ವ್ಯಾಪಾರ ವಹಿವಾಟನ್ನು ಕುಂಠಿತಗೊಳಿಸಲಿದೆ. ಕೋವಿಡ್ ಬಳಿಕ ಜಾಗತಿಕ ವ್ಯಾಪಾರ ಅತಿ ಹೆಚ್ಚು ಅವನತಿ ಹೊಂದಲಿದೆ' ಎಂದು ಹೇಳಿರುವ ವರ್ಲ್ಡ್ ಟ್ರೇಡ್ ಸಂಸ್ಥೆಯು (WTO), 2025ರ ಜಾಗತಿಕ ವ್ಯಾಪಾರದ ತನ್ನ ನಿರೀಕ್ಷೆಯನ್ನು ಗಣನೀಯವಾಗಿ ಕಡಿಮೆಗೊಳಿಸಿದೆ.
ಈ ಹಿಂದೆ ಅದು ಮಾಡಿದ ಅಂದಾಜು ಪ್ರಕಾರ, ಜಾಗತಿಕ ಸರಕು ವ್ಯಾಪಾರ (Global merchandise trade) ಶೇ. 3ರಷ್ಟು ಹೆಚ್ಚಾಗಬಹುದು ಎಂದಿತ್ತು. ಆದರೆ, ಈಗಿರುವ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಸರಕು ವ್ಯಾಪಾರ ಈ ವರ್ಷ 0.20 ಪ್ರತಿಶತದಷ್ಟು ಕುಸಿಯಬಹುದು ಎಂದು ಅಭಿಪ್ರಾಯಪಟ್ಟಿದೆ. ಒಂದು ವೇಳೆ, ಏಪ್ರಿಲ್ 2ರಂದು ಘೋಷಿಸಿದ ಟ್ಯಾರಿಫ್ ದರಗಳು ಜಾರಿಗೆ ಬಂದಲ್ಲಿ ಗ್ಲೋಬಲ್ ಟ್ರೇಡ್ ಇನ್ನೂ ಹೀನಾಯವಾಗಿ ಕುಸಿಯುತ್ತದೆ ಎಂದೂ ಡಬ್ಲ್ಯುಟಿಒ ಎಚ್ಚರಿಸಿದೆ.
ಕೋವಿಡ್ ಬಳಿಕ ಈ ಜಗತ್ತು ಮತ್ತೊಮ್ಮೆ ದೊಡ್ಡ ಆರ್ಥಿಕ ಹಿನ್ನಡೆ ಕಾಣುವ ಸಾಧ್ಯತೆಯು ಇಲ್ಲಿ ವ್ಯಕ್ತವಾಗುತ್ತಿದೆ. ಡಬ್ಲ್ಯುಟಿಒ ಕೇಂದ್ರ ಕಚೇರಿ ಇರುವ ಸ್ವಿಟ್ಜರ್ಲ್ಯಾಂಡ್ನ ಜಿನಿವಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕಿ ನಗೋಜಿ ಒಕೋಂಜೋ ಇವಿಯಾಲ (Ngozi Okonjo-Iweala) ಅವರು, 'ಜಾಗತಿಕ ಸರಕು ವ್ಯಾಪಾರ ಬೆಳವಣಿಗೆ ಕುಂಠಿತಗೊಳ್ಳಲಿರುವುದು ಬಹಳ ಆತಂಕದ ಸಂಗತಿ ಎನಿಸಿದೆ' ಎಂದಿದ್ದಾರೆ.
ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಟ್ಯಾರಿಫ್ಗಳು ಜಾರಿಗೆ ಬಂದಲ್ಲಿ, ಜಾಗತಿಕ ವ್ಯಾಪಾರ ಬೆಳವಣಿಗೆಯು ಮತ್ತಷ್ಟು 60 ಮೂಲಾಂಕಗಳಷ್ಟು ಕಡಿಮೆ ಆಗಬಹುದು. ಈ ಟ್ಯಾರಿಫ್ಗಳು ಜಗತ್ತಿನಾದ್ಯಂತ ಉಂಟು ಮಾಡುವ ವಿವಿಧ ಪರಿಣಾಮಗಳಿಂದ ಗ್ಲೋಬಲ್ ಟ್ರೇಡ್ ಮತ್ತಷ್ಟು 80 ಮೂಲಾಂಕ ಕಡಿಮೆಗೊಳ್ಳಬಹುದು. ಒಟ್ಟಾರೆಯಾಗಿ ಜಾಗತಿಕ ವ್ಯಾಪಾರವು ಶೇ. 1.50ರಷ್ಟು ಕುಸಿಯುವ ಅಪಾಯ ಇದೆ ಎಂದು ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ ಹೇಳಿದೆ.
ಅಮೆರಿಕ ಚೀನಾ ಟ್ಯಾರಿಫ್ ಪರಿಣಾಮ…
ಅಮೆರಿಕ ಮತ್ತು ಚೀನಾ ದೇಶಗಳು ಪರಸ್ಪರ ವಿಧಿಸಿರುವ ಟ್ಯಾರಿಫ್ಗಳಿಂದಾಗಿ ಆ ಎರಡು ದೇಶಗಳ ಮಧ್ಯೆ ಸರಕು ವ್ಯಾಪಾರ ಶೇ. 81ರಷ್ಟು ಕುಸಿಯಬಹುದು. ಒಂದು ವೇಳೆ, ಸ್ಮಾರ್ಟ್ಫೋನ್ಗಳಿಗೆ ಅಮೆರಿಕವು ಸುಂಕ ಹೇರಿಕೆಯಿಂದ ವಿನಾಯಿತಿ ನೀಡದೇ ಹೋಗಿದ್ದರೆ ಆ ವಹಿವಾಟು ಪ್ರಮಾಣ ಶೇ. 91ರಷ್ಟು ಕುಸಿಯುವ ಸಾಧ್ಯತೆ ಇತ್ತು ಎಂದು ಡಬ್ಲ್ಯುಟಿಒ ಮುಖ್ಯಸ್ಥೆ ತಿಳಿಸಿದ್ದಾರೆ.




