ಕಾಸರಗೋಡು: ಮುಸ್ಲಿಂಲೀಗ್ ನೇತೃತ್ವದ ಐಕ್ಯರಂಗ ಆಡಳಿತ ಹೊಂದಿರುವ ಕಾಸರಗೋಡು ನಗರಸಭಾ ಆರ್ಥಿಕ ಸ್ಥಾಯೀ ಸಮಿತಿಗೆ ತಾತ್ಕಾಲಿಕ ಅಧ್ಯಕ್ಷರ ನೇಮಕಾತಿಯಲ್ಲಿ ಸಿಪಿಎಂನ ಎಂ. ಲಲಿತಾ ಅವರಿಗೆ ಅದೃಷ್ಟ ಖುಲಾಯಿಸಿದೆ. ನಗರಸಭಾ ಉಪಾದ್ಯಕ್ಷೆ ಹಾಗೂ ಆರ್ಥಿಕ ಸಥಾಯೀ ಸಮಿತಿ ಅಧ್ಯಕ್ಷೆಯಗಿರುವ ಶಂಸೀದ ಫಿರೋಜ್ ಅವರು ದೀರ್ಘ ರಜೆಯಲ್ಲಿ ತೆರಳಿರುವುದರಿಂದ ಈ ಸ್ಥಾನ ತೆರವುಗೊಂಡಿತ್ತು. ಇದರಿಂದ ಹಣಕಾಸು ವಿಲೇವಾರಿಯಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲಾಗಿತ್ತು. ಸ್ಥಾಯೀ ಸಮಿತಿ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಬಿಜೆಪಿಯಿಂದ ಪಿ.ರಮೇಶ್ ಮತ್ತು ಸಿಪಿಎಂನಿಂದ ಎಂ. ಲಲಿತಾ ಸ್ಪರ್ಧೆಗಿಳಿದಿದ್ದರು. ನಗರಸಭೆಯ ಇಬ್ಬರು ಪಕ್ಷೇತರ ಸದಸ್ಯರು ಸಿಪಿಎಂನ ಎಂ. ಲಲಿತಾ ಅವರನ್ನು ಬೆಂಬಲಿಸುವ ಮೂಲಕ ರಮೇಶ್ ಮತ್ತು ಲಲಿತಾ ಇಬ್ಬರೂ ತಲಾ ಮೂರು ಮತ ಪಡೆದು ಫಲಿತಾಂಶ ಟೈ ಆಗಿತ್ತು. ಈ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಲಲಿತಾ ಅವರಿಗೆ ಅದೃಷ್ಟ ಖುಲಾಯಿಸಿತ್ತು.ನಗರಸಭಾ ಅಧ್ಯಕ್ಷೆ ರಜೆ ಕಳೆದು ವಾಪಸಾಗುವಲ್ಲಿ ವರೆಗೆ ಎಂ. ಲಲಿತಾ ವಿತ್ತೀಯ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಂ. ಲಲಿತಾ ಅವರು ನಗರಸಭಾ 17ನೇ ವಾರ್ಡು ಸದಸ್ಯೆಯಾಗಿದ್ದಾರೆ.




