ಕೊಚ್ಚಿ: ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ರಾಜ್ಯಮಟ್ಟದ ಲೆಕ್ಕಾಚಾರ ಬಹಿರಂಗಗೊಂಡಿದ್ದು, 2024ರಲ್ಲಿ ರಾಜ್ಯದಲ್ಲಿ ಒಟ್ಟು 1535 ಮಕ್ಕಳಮೇಲಿನ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ಬಹುತೇಕ ಪ್ರಕರಣ ಮನೆಗಳಲ್ಲೇ ನಡೆಯುತ್ತಿರುವುದಾಗಿ ಮಾಹಿತಿಯಿದೆ. 2024ರಲ್ಲಿ ನಡೆದಿರುವ 1535 ದೌರ್ಜನ್ಯ ಪ್ರಕರಣಗಳಲ್ಲಿ 1004ಮಕ್ಕಳ ಮೇಲಿನ ದೌರ್ಜನ್ಯ ಮನೆಗಳಲ್ಲಿ ನಡೆದಿದೆ. ಶಾಲೆಗಳಲ್ಲಿ 133ಮಂದಿ, ವಾಹನಗಳಲ್ಲಿ 102ಮಂದಿ, ಹೋಟೆಲ್‍ಗಳಲ್ಲಿ 99ಮಂದಿ, ಸ್ನೇಹಿತರ ಮನೆಗಳಲ್ಲಿ 96ಮಂದಿ, ಧಾರ್ಮಿಕ ಸಂಸ್ಥೆಗಳಲ್ಲಿ 60ಮಂದಿ, ಆಸ್ಪತ್ರೆಗಳಲ್ಲಿ 29ಮಂದಿ, ಚೈಲ್ಡ್ ಕೇರ್ ಕೇಂದ್ರಗಳಲ್ಲಿ 12 ಮಂದಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದಾಗಿ ಲೆಕ್ಕಾಚಾರ ತಿಳಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳನ್ನು ಪರಿಶೀಲಿಸಿದಾಗ ವರ್ಷ ಕಳೆದಂತೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
2021ರಲ್ಲಿ ಕೇರಳದಲ್ಲಿ 3559ಪೋಕ್ಸೋ ಕೇಸು ದಾಖಲಾಗಿದ್ದರೆ, 2022ರಲ್ಲಿ 4586ಪ್ರಕರಣ, 2023ರಲ್ಲಿ 4641 ಪ್ರಕರಣ, 2024ರಲ್ಲಿ 4549 ಪ್ರಕರಣ ಹಾಗೂ 2025ರ ಫೆಬ್ರವರಿ ವರೆಗೆ 888ಪೋಕ್ಸೋ ಪ್ರಕರಣ ದಾಖಲಾಗಿದೆ.
ಚೈಲ್ಡ್ ಪ್ರೊಟೆಕ್ಷನ್ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಗಂಡು ಮಕ್ಕಳ ಮೇಲಿನ ಕಿರುಕುಳ ಹಚ್ಚುತ್ತಿರುವುದನ್ನು ಪತ್ತೆಹಚ್ಚಲಾಗಿದೆ. 2022ರಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇ. 13ರಷ್ಟು ಕಿರುಕುಳ ಗಂಡುಮಕ್ಕಳ ಮೇಲೆ ನಡೆದಿದ್ದರೆ, ಈ ಸಂಖ್ಯೆ 2024ರಲ್ಲಿ ಶೇ. 18ಕ್ಕೆ ಏರಿಕೆಯಾಗಿದೆ. ಇದರಲ್ಲಿ ಏಳರಿಂದ 12ವರ್ಷದೊಳಗಿನ ಪ್ರಾಯದ ಮಕ್ಕಳ ಮೇಲೆ ಹೆಚ್ಚಿನ ಕಿರುಕುಳ ನಡೆದಿದೆ. 2024ರಲ್ಲಿ ತಿರುವನಂತಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಅತೀ ಕಡಿಮೆ ಪೋಕ್ಸೋ ಪ್ರಕರಣ ದಾಖಲಾಗಿದೆ.





