ಕಣ್ಣೂರು: ಕಣ್ಣೂರು ವಿಶ್ವ ವಿದ್ಯಾಲಯದ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿ ಪಾಲಕುನ್ನುವಿನ ಗ್ರೀನ್‍ವುಡ್ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜು ಪ್ರಾಂಶುಪಾಲ ಪಿ. ಅಜೀಶ್‍ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಬಯಲು ಹಗರಣದ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಳ್ಳುತ್ತಿದ್ದಂತೆ ಕಾಲೇಜು ಆಡಳಿತ ಪ್ರಾಂಶುಪಾಲನ ಅಮಾನತುಗೊಳಿಸಿದೆ. ಇ-ಮೈಲ್ ಮೂಲಕ ಕಳುಹಿಸಿಕೊಟ್ಟಿದ್ದ ಪ್ರಶ್ನೆಪತ್ರಿಕೆಗಳ ಗೌಪ್ಯತೆಯನ್ನು ಪಾಲಿಸದೆ, ಬಹಿರಂಗಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಾಂಶುಪಾಲರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿತ್ತು. ಪ್ರಾಂಶುಪಾಲರು ವಿಶ್ವ ವಿದ್ಯಾಲಯವನ್ನು ವಂಚಿಸಿರುವುದಾಗಿಯೂ ಎಫ್‍ಐಆರ್‍ನಲ್ಲಿ ತಿಳಿಸಲಾಗಿದೆ. ಬಿಸಿಎ ಆರನೇ ಸೆಮಿಸ್ಟರ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು.
ವಿಶ್ವ ವಿದ್ಯಾಲಯ ಕಾಲೇಜುಗಳಿಗೆ ಪರೀಕ್ಷೆ ಆರಂಭಗೊಳ್ಳುವ ಎರಡು ತಾಸು ಮುಂಚಿತವಾಗಿ ಮೈಲ್ ಮೂಲಕ ಆಯಾ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡುವ ಪ್ರಶ್ನೆಪತ್ರಿಕೆಯನ್ನು ತೆರೆಯಲಿರುವ ಪಾಸ್‍ವರ್ಡನ್ನು ಒಂದು ಗಂಟೆ ಮುಂಚಿತವಾಗಿ ಕಳುಹಿಸಿಕೊಡಲಾಗುತ್ತದೆ. ಈ ರೀತಿ ಲಭಿಸಿದ ಪ್ರಶ್ನೆಪತ್ರಿಕೆಗಳನ್ನು ಪ್ರಾಂಶುಪಾಲ ಕೆಲವು ವಿದ್ಯಾರ್ಥಿಗಳ ವಾಟ್ಸಪ್ ನಂಬರ್‍ಗೆ ಕಳುಹಿಸಿಕೊಟ್ಟಿದ್ದು, ಇದನ್ನು ವಿದ್ಯಾರ್ಥಿಗಳು ದಾಖಲೆಸಹಿತ ಬಹಿರಂಗಪಡಿಸಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ಹೊರಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿಶ್ವ ವಿದ್ಯಾಲಯ ವ್ಯಾಪ್ತಿಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ವೀಕ್ಷಕರನ್ನು ನೇಮಿಸಲು ವಿಶ್ವ ವಿದ್ಯಾಲಯ ತೀರ್ಮಾನಿಸಿದೆ. ಸೋಮವಾರದಿಂದ ಪ್ರತಿ ಕೇಂದ್ರಕ್ಕೆ ಒಬ್ಬರಂತೆ ವೀಕ್ಷಕರನ್ನು ನೇಮಿಸಲಾಗುವುದು. ಇ-ಮೈಲ್‍ನಿಂದ ಪ್ರಶ್ನೆಪತ್ರಿಕೆ ಡೌನ್‍ಲೋಡ್ ನಡೆಸುವ ಸಂದರ್ಭ ವೀಕ್ಷಕರ ಉಪಸ್ಥಿತಿ ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಮಧ್ಯೆ ಪಾಲಕುನ್ನಿನ ಗ್ರೀನ್‍ವುಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಎ ಆರನೇ ಸೆಮಿಸ್ಟರ್‍ನ ಮರುಪರೀಕ್ಷೆ ನಡೆಸಲೂ ವಿಶ್ವ ವಿದ್ಯಾಲಯ ತೀರ್ಮಾನಿಸಿದೆ. ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಪರೀಕ್ಷಾ ಕೆಂದ್ರವನ್ನು ಕಾಸರಗೋಡಿನ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು.





