HEALTH TIPS

ಬ್ರಹ್ಮಕಲಶ ಸಿದ್ದತೆಯಲ್ಲಿರುವ ದೇಲಂಪಾಡಿ ದೇಗುಲದ ಗರ್ಭಗುಡಿ ಬಳಿ ಪತ್ತೆಯಾದ ಆಲೂಪರ ಕಾಲದ ದೀಪಸ್ತಂಭ ಶಾಸನ

ಕುಂಬಳೆ: ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿರುವ ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ತನ್ನ ಗರ್ಭಗುಡಿಯ ಬಳಿ ಕ್ಷೇತ್ರ ಪ್ರಾಚೀನತೆಗೆ ಕನ್ನಡಿ ಹಿಡಿಯುವ ಶಾಸನವನ್ನು ಕಾಯ್ದಿಟ್ಟುಕೊಂಡು ಜನಗಮನ ಸೆಳೆದಿದೆ. ಈ ಮೂಲಕ ದೇಲಂಪಾಡಿ ದೇವಾಲಯ ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನ ಅಲುಪರ ಕಾಲದಲ್ಲೇ ಇತ್ತೆಂಬ ಪ್ರಾಚೀನ ಇತಿಹಾಸಕ್ಕೆ ಬೆಳಕು ಚೆಲ್ಲಿದೆ.


ಪ್ರಸ್ತುತ ಶಾಸನವನ್ನು ಕಾಸರಗೊಡು ಸರ್ಕಾರಿ ಕಾಲೇಜಿನ ಪ್ರಾದ್ಯಾಪಕ, ಶಾಸನ ತಜ್ಞ ಡಾ.ರಾಧಾಕೃಷ್ಣ ಬೆಳ್ಳೂರು ಪರಿಶೀಲಿಸಿ, ಅದರ ಪ್ರತಿ ತೆಗೆದು ಅಧ್ಯಯನ ನಡೆಸಿ “12-13ನೇ ಶತಮಾನದ ಅಲೂಪ ರಾಜವಂಶಸ್ಥರ ಕಾಲದ ಕನ್ನಡ ಲಿಪಿಯ ಶಾಸನವೆಂದೂ ದೇವಾಲಯಕ್ಕೆ ದೀಪಸ್ತಂಭ ದಾನ ಮಾಡಿದ ಅರಸರ ದಾನ ಶಾಸನ”ಎಂದೂ ತಿಳಿಸಿದ್ದಾರೆ.

ಈ ಶಾಸನವು ಶತಮಾನಗಳಿಂದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಗರ್ಭಗುಡಿಯ ಗೋಡೆಗೊರಗಿಸಿಟ್ಟ ಸ್ಥಿತಿಯಲ್ಲಿತ್ತು. ಇದರ ಒಂದು ಬದಿ ಸವೆದು ಮಾಸಿ ಹೋದರೆ ಇನ್ನೊಂದು ಬದಿಯಲ್ಲಿ ಶಿವಲಿಂಗ ಲಾಂಛನ ಸಹಿತವಾದ ಕನ್ನಡ ಬರಹಗಳಿವೆ. ಎರಡು ಗೆರೆಗಳನ್ನೆಳೆದು ಅಕ್ಷರ ಬರೆಯಲಾಗಿದೆ. ಇದು ದೇಲಂಪಾಡಿ ಕ್ಷೇತ್ರದ ಪ್ರಾಚೀನತೆಗೆ ಕನ್ನಡಿ ಹಿಡಿಯುತ್ತಿದೆ. ತುಳು ನಾಡಿಗೆ ವಿಜಯನಗರ ಸಾಮ್ರಾಜ್ಯ ವಿಸ್ತರಿಸಲ್ಪಡುವ ಮೊದಲೇ ಅಲೂಪ ಅರಸೊತ್ತಿಗೆಯ ಕಾಲದಲ್ಲಿ 12ನೇ ಶತಮಾನದಲ್ಲೇ ದೇಲಂಪಾಡಿ ದೇವಾಲಯ ರಾರಾಜಿಸುತಿತ್ತು ಎಂಬುದಕ್ಕೆ ಈ ಶಾಸನ ನಿದರ್ಶನವಾಗಿದೆ.


ಕೇರಳದಲ್ಲೇ ಅತ್ಯಧಿಕ ಶಾಸನಗಳು ದೊರೆತ ನಾಡು ಕಾಸರಗೋಡು ತಾಲೂಕು. 10 ರಿಂದ 14ನೇ ಶತಮಾನದಲ್ಲಿ ಚಂದ್ರಗಿರಿ ನದಿಯನ್ನು ಗಡಿಯಾಗಿರಿಸಿಕೊಂಡು ಅರಸರು ನಾಡನ್ನಾಳಿದ ಕುರುಹುಗಳಿಗೆ ಶಾಸನಗಳು ಇತಿಹಾಸದ ಕನ್ನಡಿ ಹಿಡಿಯುತ್ತಿವೆ. ಕಾಸರಗೋಡು ತಾಲೂಕೊಂದರಲ್ಲೇ ಈ ಮೊದಲು 20 ಶಾಸನಗಳು ದೊರಕಿದ್ದು, ದೇಲಂಪಾಡಿ ಶಾಸನ ಈ ಸಾಲಿನಲ್ಲಿ 21ನೇ ಶಾಸನವಾಗಿ ಜೋಡಣೆಗೊಂಡಿದೆ. ಕಾಸರಗೋಡು ಭೂಭಾಗದಲ್ಲಿ ಸಿಕ್ಕಿದ ಅತ್ಯಂತ ಪ್ರಾಚೀನ ಶಾಸನ(10ನೇ ಶತಮಾನ) ಗೋಸಾಡ ಮಹಿಷ ಮರ್ದಿನಿ ದೇವಾಲಯದಲ್ಲಿದೆ. ಇದೇ ರೀತಿ ಅತೀ ದೊಡ್ಡ ಆಳೆತ್ತರದ ಎರಡೂ ಬದಿ ಬರೆದ ಶಾಸನವು ಅಂಬಾರು ಸದಾಶಿವ ದೇವಾಲಯದಲ್ಲಿದೆ. ತುಳು ಭಾಷೆಯ ಮೊದಲ ಶಾಸನ ಅನಂತಪುರದಲ್ಲಿದೆ. ಮೀಂಜ ಗ್ರಾಮದಲ್ಲಿ 14ನೇ ಶತಮಾನದ ವಿಜಯನಗರ ಕಾಲದ ಶಾಸನವಿದ್ದರೆ ಉಳಿದಂತೆ ಮಂಗಲ್ಪಾಡಿ, ಐಲ, ಮುಳಿಂಜ, ತಳಂಗರೆ, ಹೇರೂರು, ಬಜಕೂಡ್ಳು ಸೇರಿದಂತೆ ತುಳು, ಕನ್ನಡ ಭಾಷೆಯ 21ನೇ ಶಾಸನ ತಾಲೂಕಿನಲ್ಲಿದೆ.


ದೊರೆತ ಶಾಸನಗಳು ಜನರ ಅವಜ್ಞೆಯಿಂದ ಸುರಕ್ಷಿತವಾಗಿಡದಿದ್ದ ಕಾರಣದಿಂದ ಅನೇಕ ಶಾಸನಗಳ ಪೂರ್ಣ ರೂಪವನ್ನು ಓದಲಾಗದೇ ಹೋಗಿವೆ. ಪ್ರಸ್ತುತ ದೇಲಂಪಾಡಿ ಶಾಸನ ಕೂಡಾ ಒಂದು ಬದಿ ಸವೆದಿದೆ. ಅದರ ಮೇಲೆ ಸಿಮೆಂಟು ಕೂಡಾ ಮೆತ್ತಿಕೊಂಡು ಮೂಲ ಅಕ್ಷರಕ್ಕೆ ಹಾನಿಯಾಗಿದೆ. ಆದರೂ ಒಂದು ಬದಿ ಲಾಂಛನ ಸಹಿತ ಗೋಚರವಾಗುತ್ತಿದೆ.

ಇದು ಕ್ಷೇತ್ರ ಪ್ರಾಚೀನತೆಯ ಏಕೈಕ ಕುರುಹಾಗಿದೆ. 2025ರ ಬ್ರಹ್ಮಕಲಶದೊಂದಿಗೆ ಶಾಸನವನ್ನು ಸುರಕ್ಷಿತವಾಗಿ, ಜನತಾ ದರ್ಶನಕ್ಕೆ ದೊರೆಯುವಂತೆ ಪ್ರದರ್ಶನಕ್ಕೆ ಇಡಲಾಗುವುದೆಂದು ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ರೈ ದೇಲಂಪಾಡಿ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries