ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆರ್ಕಳದಲ್ಲಿ ಮನೆ ಎದುರು ಪಟಾಕಿಸಿಡಿಸಿ ಭೀತಿ ಸೃಷ್ಟಿಸಿರುವುದನ್ನು ಪ್ರಶ್ನಿಸಿದ ದ್ವೇಷದಲ್ಲಿ ತಂಡವೊಂದು ತಂದೆ ಮತ್ತು ಮಗ ಸೇರಿದಂತೆ ನಾಲ್ವರನ್ನು ಇರಿದು ಗಾಯಗೊಳಿಸಿದೆ.
ಚೆಂಗಳ ಸಿಟಿಸನ್ ನಗರ ನಿವಾಸಿ ಇಬ್ರಾಹಿಂ ಸೈನುದ್ದೀನ್, ಇವರ ಪುತ್ರ ಫವಾಸ್, ಸ್ನೇಹಿತ ತೈವಳಪ್ಪು ನಿವಾಸಿ ರಜಾಕ್ ಹಾಗೂ ಸಿಟಿಸನ್ ನಗರ ನಿವಾಸಿ ಮುನ್ಶೀದ್ ಇರಿತದಿಂದ ಗಾಯಗೊಂಡವರು. ಗಂಭೀರ ಗಾಯಗೊಂಡ ಫವಾಸ್ ಅವರನ್ನು ಮಂಗಳೂರು ಹಾಗೂ ಇತರರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗಾಯಾಳು ಇಬ್ರಾಹಿಂ ಸೈನುದ್ದೀನ್ ನೀಡಿದ ದೂರಿನನ್ವಯ ಅಬ್ದುಲ್ ಖಾದರ್, ಮೊಯ್ದೀನ್, ನಫೀನ್ ಸೇರಿದಂತೆ 10ಮಂದಿ ವಿರುದ್ಧ ನರಹತ್ಯಾ ಯತ್ನಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಭಾನುವಾರ ಸಂಜೆ 7.30ಕ್ಕೆ ಘಟನೆ ನಡೆದಿದ್ದು, ಮನೆ ಎದುರು ತಂಡವೊಂದುಪಟಾಕಿ ಸಿಡಿಸುತ್ತಿರುವುದನ್ನು ಇಬ್ರಾಹಿಂ ಸೈನುದ್ದೀನ್ ಹಾಗೂ ಇತರರು ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ತಂಡ ಕಠಾರಿ, ಚಾಕು ಸೇರಿದಂತೆ ಮಾರಕಾಯುಧದೊಂದಿಗೆ ಆಗಮಿಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.




