ಕೋಲ್ಕತಾ: ಮುರ್ಷಿದಾಬಾದ್ ಹಿಂಸಾಚಾರದಿಂದಾಗಿ ಮನೆತೊರೆದ ಸಂತ್ರಸ್ತರನ್ನು ಭೇಟಿ ಮಾಡಲು ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್ ಬೋಸ್ ಅವರು ಮಾಲ್ಡಾಗೆ ಆಗಮಿಸಿದ್ದಾರೆ.
ಸಂತ್ರಸ್ತರನ್ನು ಭೇಟಿ ಮಾಡುತ್ತೇನೆ. ಅಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಸ್ಥಳೀಯರಿಂದಲೇ ಮಾಹಿತಿ ಪಡೆಯುತ್ತೇನೆ’ ಎಂದು ಕೋಲ್ಕತಾದಲ್ಲಿ ಅವರು ಹೇಳಿದ್ದರು.
ಮುರ್ಷಿದಾಬಾದ್ ಸುಧಾರಿಸಿಕೊಳ್ಳುತ್ತಿದೆ. ಹೀಗಾಗಿ ಇಲ್ಲಿಗೆ ಹೊರಗಿನವರು ಭೇಟಿ ನೀಡುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಬಹುದು. ಹೀಗಾಗಿ ರಾಜ್ಯಪಾಲರು ಭೇಟಿ ನೀಡಬಾರದು ಎಂದು ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು.
ಮಹಿಳಾ ಆಯೋಗ ಭೇಟಿ: ಮಾಲ್ಡಾದಲ್ಲಿ ನಿರ್ಮಾಣ ಮಾಡಲಾಗಿರುವ ಪರಿಹಾರ ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಶುಕ್ರವಾರ ಭೇಟಿ ನೀಡಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ ಪರಿಶೀಲನೆ ನಡೆಸಿದೆ.




