ಲಂಡನ್ (AP): ಇನ್ನುಮುಂದೆ 16 ವರ್ಷ ವಯೋಮಾನದ ಒಳಗಿನವರು ಪೋಷಕರ ಅನುಮತಿ ಇಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬರಲು ಸಾಧ್ಯವಿಲ್ಲ ಮತ್ತು ನಗ್ನ ಅಥವಾ ಅಶ್ಲೀಲ ಚಿತ್ರಗಳನ್ನು ಬ್ಲರ್ ಮಾಡದೆ ನೇರವಾಗಿ ಕಳುಹಿಸುವಂತಿಲ್ಲ ಎಂದು ಮೆಟಾ ಸಂಸ್ಥೆಯ ಮುಖ್ಯಸ್ಥರು ಮಂಗಳವಾರ ತಿಳಿಸಿದರು.
ನೂತನ ಕ್ರಮವು ಮೊದಲಿಗೆ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಅನ್ವಯವಾಗಲಿದೆ. ನಂತರ ಜಾಗತಿಕ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಹೇಳಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಅವಕಾಶ ನೀಡಿದ್ದ ಮೆಟಾ, ಆನ್‌ಲೈನ್‌ನಲ್ಲಿ ಮಕ್ಕಳ ಚಲನವಲನಗಳ ಮೇಲ್ವಿಚಾರಣೆಗೆ ಪೋಷಕರಿಗೆ ಹಲವು ಆಯ್ಕೆಗಳನ್ನು ನೀಡಿತ್ತು.
ಹದಿಹರೆಯದವರ ಸುರಕ್ಷತಾ ದೃಷ್ಟಿಯಿಂದ ಫೇಸ್‌ಬುಕ್ ಮತ್ತು ಮೆಸೆಂಜರ್ ಜಾಲತಾಣಗಳಿಗೂ ಇದೇ ನಿಯಮಗಳನ್ನು ಶೀಘ್ರವೇ ವಿಸ್ತರಿಸಲಾಗುತ್ತದೆ ಎಂದು ಮೆಟಾ ತಿಳಿಸಿದೆ.




