ಶ್ರೀನಗರ/ನವದೆಹಲಿ: ಪಾಕಿಸ್ತಾನದ ಮಿಲಿಟರಿಯು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ದಾಳಿ ನಡೆಸಿದೆ ಎಂದು ಮಿಲಿಟರಿ ಮೂಲಗಳು ಹೇಳಿವೆ.
ಪಾಕಿಸ್ತಾನ ಸೇನೆಯ ದಾಳಿಯಿಂದಾಗಿ 778 ಕಿ.ಮೀ ಉದ್ದ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿಗೆ ಭಂಗ ಉಂಟಾಗಿದೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಪಾಕಿಸ್ತಾನದ ಸೇನೆಯು ಸತತ ಎರಡನೆಯ ರಾತ್ರಿಯೂ ಗುಂಡಿನ ದಾಳಿ ನಡೆಸಿದೆ.
ಕಾಶ್ಮೀರದಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆಯಿತು. ಇದಕ್ಕೆ ಭಾರತದ ಸೇನಾಪಡೆಯಿಂದ ತಕ್ಕ ಪ್ರತ್ಯುತ್ತರ ನೀಡಲಾಯಿತು ಎಂದು ಮೂಲಗಳು ವಿವರಿಸಿವೆ.
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಹೆಡೆಮುರಿಕಟ್ಟುವುದಾಗಿ ಭಾರತ ಹೇಳಿದ ನಂತರದಲ್ಲಿ ಪಾಕಿಸ್ತಾನದ ಸೇನೆಯನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.
ಕದನ ವಿರಾಮ ಒಪ್ಪಂದದ ಉಲ್ಲಂಘನೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಪೂಂಛ್‌ನಲ್ಲಿ ನಿಯಂತ್ರಣ ರೇಖೆಗೆ ಸನಿಹದಲ್ಲಿ ಇರುವ ಗ್ರಾಮಗಳ ಜನರು ಸರ್ಕಾರ ನಿರ್ಮಿಸಿರುವ ಬಂಕರ್‌ಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಗಡಿಯಾಚೆಯಿಂದ ಶೆಲ್ ದಾಳಿ ಹೆಚ್ಚಾದರೆ ಬಂಕರ್‌ಗಳಲ್ಲಿ ಅವರು ರಕ್ಷಣೆ ಪಡೆಯುತ್ತಾರೆ.
ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಸ್ಥಾಪಿಸುವ ಉದ್ದೇಶದಿಂದ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳು ದಾಳಿಯನ್ನು ನಿಲ್ಲಿಸುವ ಘೋಷಣೆ ಮಾಡಿದ್ದವು.
ಇದಾದ ನಂತರದಲ್ಲಿ ಪರಿಸ್ಥಿತಿಯು ಬಹುತೇಕ ಶಾಂತಿಯುತವಾಗಿತ್ತು. ಎರಡೂ ಕಡೆಯ ಸೇನಾಪಡೆಗಳು ಒಪ್ಪಂದವನ್ನು ಬಹುತೇಕ ಪಾಲಿಸಿದ್ದವು. ಆದರೆ ಪಾಕಿಸ್ತಾನದ ಸೇನೆಯು ನುಸುಳುಕೋರರಿಗೆ ಬೆಂಬಲ ಒದಗಿಸಲು, ಅವರಿಗೆ ರಕ್ಷಣೆ ನೀಡಲು ಆಗಾಗ ಗುಂಡಿನ ದಾಳಿಯ ಮೊರೆ ಹೋಗುತ್ತಿತ್ತು.
ಪಾಕಿಸ್ತಾನ ಮೂಲದ 120ಕ್ಕೂ ಹೆಚ್ಚು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇವರ ಪೈಕಿ 70 ಮಂದಿ ಕಾಶ್ಮೀರ ಕಣಿವೆಯಲ್ಲಿ, ಇನ್ನುಳಿದವರು ಜಮ್ಮು ಪ್ರದೇಶದಲ್ಲಿ ಇದ್ದಾರೆ ಎಂದು ಮೂಲಗಳು ಹೇಳಿವೆ.




