ನವದೆಹಲಿ: ಬೈಸರನ್ ಕಣಿವೆ ಪ್ರದೇಶವನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ ಭದ್ರತಾ ಪಡೆಗಳಿಗೆ ತಿಳಿಸದೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಹೇಳುವ ಮೂಲಕ ಕೇಂದ್ರ ಸರ್ಕಾರವು ನಾಯಕರನ್ನು ದಾರಿ ತಪ್ಪಿಸಿದೆ ಎಂದು ವಿಪಕ್ಷಗಳು ಶನಿವಾರ ಆರೋಪಿಸಿದವು.
ಆದರೆ, ಈ ಪ್ರದೇಶವು ವರ್ಷದ ಬಹುಪಾಲು ತೆರೆದಿರುತ್ತದೆ ಎಂದು ಸ್ಥಳೀಯ ಪ್ರವಾಸ ನಿರ್ವಾಹಕರು ಪ್ರತಿಪಾದಿಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಗುರುವಾರ ನಡೆದಿತ್ತು. ಭದ್ರತಾ ಪಡೆಗಳಿಗೆ ತಿಳಿಸದೆಯೇ ಏಪ್ರಿಲ್ 20ರಂದು ಕಣಿವೆಗೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು ಎಂದು ಗುಪ್ತಚರ ಬ್ಯುರೊದ ಹಿರಿಯ ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದರು. ಆದರೆ, ಜೂನ್‌ನಲ್ಲಿ ಮಾತ್ರ ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಕರು ಈ ಪ್ರದೇಶಕ್ಕೆ ಬರಬಹುದು ಎಂಬುದು ಅವರ ವಾದವಾಗಿತ್ತು.
'ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 24 ರಂದು ನಡೆದ ಸರ್ವಪಕ್ಷ ಸಭೆಗೆ ಸರಿಯಾಗಿ ಮಾಹಿತಿ ನೀಡಲಾಗಿಲ್ಲ ಎಂದು ತೋರುತ್ತದೆ. ವಾಸ್ತವವಾಗಿ ಕಣಿವೆ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ತೋರುತ್ತದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, 'ಸರ್ವಪಕ್ಷ ಸಭೆಗೆ ಬಿಜೆಪಿ ಸುಳ್ಳು ಹೇಳಿದೆ' ಎಂದು ಆರೋಪಿಸಿದರು.
ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್, 'ಬೈಸರನ್ ಕಣಿವೆಗೆ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸರಿಗೆ ಅನುಮತಿ ಪಡೆದಿಲ್ಲ ಎಂದು ಹೇಳುವ ಮೂಲಕ ಗೃಹ ಸಚಿವ ಅಮಿತ್ ಶಾ ಹಾಗೂ ಮೋದಿ ಸರ್ಕಾರವು ವಿರೋಧ ಪಕ್ಷಗಳನ್ನು ತಪ್ಪುದಾರಿಗೆಳೆದಿದ್ದಾರೆ' ಎಂದು ದೂರಿದರು.
'ಬೈಸರನ್ ಕಣಿವೆಯು 2020ರಿಂದ ತೆರೆದಿದೆ. ಹಿಮ ಬೀಳುವ ತಿಂಗಳುಗಳಲ್ಲಿ ಮಾತ್ರ ಇದನ್ನು ಮುಚ್ಚಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಲೆಫ್ಟಿನೆಂಟ್ ಗವರ್ನರ್ ಅಡಿಯಲ್ಲಿದೆ. ಅಮಿತ್ ಶಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
'ಮೋದಿ ಸರ್ಕಾರವು ದಿಕ್ಕು ತಪ್ಪಿಸುವ ಹೇಳಿಕೆ ನೀಡಿದೆ. ಉಗ್ರರ ದಾಳಿಗೆ ಗುಪ್ತಚರ ವೈಫಲ್ಯವೇ ಪ್ರಮುಖ ಕಾರಣ' ಎಂದು ಸಿಪಿಐ ರಾಜ್ಯಸಭಾ ಸದಸ್ಯ ಪಿ.ಸಂತೋಷ್ ಕುಮಾರ್ ಹೇಳಿದರು.




