ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ, ಏಪ್ರಿಲ್ 21 ರಿಂದ 27 ರವರೆಗೆ ಕಾಳಿಕ್ಕಡವು ಮೈದಾನದಲ್ಲಿ ನಡೆಯಲಿರುವ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಪೂರ್ವಭಾವಿಯಾಗಿ ಕಾಸರಗೋಡಿನ ಸಾಹಿತ್ಯ ಇತಿಹಾಸದ ಕುರಿತು ಸಾಂಸ್ಕøತಿಕ ಉಪನ್ಯಾಸವನ್ನು ಕಾಞಂಗಾಡ್ ಪಿ. ಸ್ಮಾರಕದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಇ.ಚಂದ್ರಶೇಖರನ್, ಕಾಸರಗೋಡಿನ ಸಾಹಿತ್ಯ ಇತಿಹಾಸವು ಕೇರಳದ ಸಾಹಿತ್ಯ ಇತಿಹಾಸದಿಂದ ಭಿನ್ನವಾದ ಅಧ್ಯಾಯವಾಗಿದೆ ಎಂದು ಹೇಳಿದರು. ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗಮನಕ್ಕೆ ಬಾರದ ವಿಶಿಷ್ಟ ಪ್ರತಿಭೆಗಳಿವೆ, ಇಂದಿಗೂ ಕಾಸರಗೋಡಿನಿಂದ ಅನೇಕ ಬರಹಗಾರರು ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕರು ಹೇಳಿದರು.
ಮುಖ್ಯ ಭಾಷಣಕಾರ ಇ.ಪಿ.ರಾಜಗೋಪಾಲನ್ ಮಾತನಾಡಿ, ಕನ್ನಡವನ್ನು ಸಹೋದರ ಭಾಷೆ ಎಂದು ಪರಿಗಣಿಸಬೇಕು ಮತ್ತು ಸಾಹಿತ್ಯದಲ್ಲಿ ಭಾಷೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು. ಕಾಸರಗೋಡು "ಸಪ್ತಭಾಷಾ ಸಂಗಮಭೂಮಿ" ಎಂಬ ಅಭಿವ್ಯಕ್ತಿಯನ್ನು ಹೊಂದಿದ್ದರೂ, ಅದು 21 ಭಾಷೆಗಳನ್ನು ಮಾತೃಭಾಷೆಯಾಗಿ ಮಾತನಾಡುವ ಪ್ರದೇಶವಾಗಿದೆ ಎಂದು ಅವರು ಗಮನಸೆಳೆದರು.
ಕಾಞಂಗಾಡ್ ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಪಿ. ಪ್ರಭಾಕರನ್, ಹೊಸದುರ್ಗ ತಾಲ್ಲೂಕು ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಪಿ. ವೇಣುಗೋಪಾಲನ್, ಮತ್ತು ಕಾಞಂಗಾಡ್ ಪಿ. ಸ್ಮಾರಕ ಸಮಿತಿಯ ಕಾರ್ಯದರ್ಶಿ ಕೆ.ವಿ. ಸಜೀವನ್ ಮಾತನಾಡಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿ, ಮಾಹಿತಿ ಸಹಾಯಕಿ ನಿಹಾರಿಕಾ ರಾಘವನ್ ವಂದಿಸಿದರು.





