ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಂಗೋಳಿ-ಮಾಯಿಪ್ಪಾಡಿ ರಸ್ತೆಯ ರಾಜಸ್ಥಾನ್ ಮಾರ್ಬಲ್ ಸನಿಹ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸುತ್ತಿದ್ದ ಉಪ್ಪಳ ಸೋಂಕಾಳ್ ಕೋಡಿಬೈಲು ನಿವಾಸಿ ಮಹಮ್ಮದ್ ರಿಯಾಸ್ ಎಂಬಾತನನ್ನು ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಕೆ.ವಿ ವಿನೋದ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಆರೋಪಿಯನ್ನು ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.
ತನ್ನ ಫೋರ್ಚುನರ್ ಕಾರನ್ನು ರಸ್ತೆಯಲ್ಲಿ ಅಪಾಯಕರ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸಾರ್ವಜನಿಕರಲ್ಲಿ ಭಿತಿಯ ವಾತಾವರಣ ಸೃಷ್ಟಿಸುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಂತೆ ಅತಿಯಾದ ವೇಗದಿಂದ ಕಾರು ಚಲಾಯಿಸಿ ಪರಾರಿಯಾಗಲು ಯತ್ನಿಸಿದಾಗ ಹಿಂಬಾಲಿಸಿ ಸೆರೆಹಿಡಿದಿದ್ದರು. ಈ ಹಿಂದೆ ಕುಂಬಳೆ ಶಾಲಾ ಮೈದಾನ ಹಾಗೂ ಪಚ್ಚಂಬಳದಲ್ಲಿ ಅಪಾಯಕಾರಿಯಾಗಿ ಕಾರು ಚಲಾಯಿಸಿ ಚಿತ್ರೀಕರಣ ನಡೆಸುತ್ತಿದ್ದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪಚ್ಚಂಬಳದಲ್ಲಿ ಚಿತ್ರೀಕರಣ ವೇಳೆ ಜೀಪು ಬೆಂಕಿಗಾಹುತಿಯಾಗಿತ್ತು.




