ಜೈಸೆಲ್ಮೇರ್: ರಾಜಸ್ಥಾನದ ಜೈಸೆಲ್ಮೇರ್ನ ಮರುಭೂಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಕೃತಕ ಗರ್ಭಧಾರಣೆ ಮೂಲಕ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಮೂರನೇ ಮರಿ ಜನಿಸಿದೆ. ಈ ಮೂಲಕ ಭಾರತ ಈ ಪಕ್ಷಿಯಲ್ಲಿ ಕೃತಕ ಗರ್ಭಧಾರಣೆ ಯಶಸ್ಸು ಸಾಧಿಸಿದ ಮೊದಲ ದೇಶವಾಗಿದೆ.
ವೇಗವಾಗಿ ನಶಿಸಿ ಹೋಗುತ್ತಿರುವ ಪಕ್ಷಿ ಸಂಕುಲದಲ್ಲಿ ಒಂದಾಗಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳನ್ನು ಉಳಿಸಿಕೊಳ್ಳಲು ಅಬುಧಾಬಿ ಮೂಲದ 'ಇಂಟರ್ನ್ಯಾಷನಲ್ ಫಂಡ್ ಫಾರ್ ಹೌಬಾರ ಕನ್ಸರ್ವೆಷನ್' ಸಂಸ್ಥೆಯಿಂದ ಪಡೆದ ಕೃತಕ ಗರ್ಭಧಾರಣೆಯ ತಂತ್ರಜ್ಞಾನ ಮತ್ತು ತರಬೇತಿ ನೆರವಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ತರಬೇತಿ ಪಡೆದು, ಕೃತಕ ಗರ್ಭಧಾರಣೆ ನಡೆಸಿದ್ದರು. ಇದು ಭಾರತದ ಐತಿಹಾಸಿಕ ಸಾಧನೆಯಾಗಿದೆ. ಅಳವಿನಂಚಿನಲ್ಲಿರುವ ಪಕ್ಷಿಗಳಿಗೆ ಹೊಸ ಜೀವ ನೀಡುವ ಪ್ರಯತ್ನದಲ್ಲಿ ಇದು ಒಂದು ಮೈಲಿಗಲ್ಲು ಎಂದು ಜೈಸೆಲ್ಮೇರ್ನ ಬಸ್ಟರ್ಡ್ ಬ್ರೀಡಿಂಗ್ ಸೆಂಟರ್ನ ಹಿರಿಯ ವಿಜ್ಞಾನಿ ಸುತಿತೋ ದತ್ತಾ ತಿಳಿಸಿದ್ದಾರೆ.
ಮಾರ್ಚ್ 20 ರಂದು ರ್ಶಾ ಎಂಬ ಹೆಣ್ಣು ಪಕ್ಷಿಗೆ ಕೃತಕ ಗರ್ಭಧಾರಣೆ ಮಾಡಲಾಗಿತ್ತು. ಮಾರ್ಚ್ 26 ರಂದು ಪಕ್ಷ ಮೊಟ್ಟೆ ಇಟ್ಟಿತ್ತು. ಈ ಮೊಟ್ಟೆಯಿಂದ ಏಪ್ರಿಲ್ 17 ರಂದು ಮರಿ ಹೊರಬಂದಿದೆ. ಈ ಮೂಲಕ ರಾಷ್ಟ್ರೀಯ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಗಳ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ ಎಂದು ದತ್ತಾ ಮಾಹಿತಿ ನೀಡಿದ್ದಾರೆ.




