ಮಂಜೇಶ್ವರ: ವರ್ಕಾಡಿ ಪಂಚಾಯಿತಿಯ ಬಾಕ್ರಬೈಲಿನಲ್ಲಿ ಯುವಕ ಗುಂಡೇಟಿನಿಂದ ಗಾಯಗೊಂಡ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಶ್ವಾನದಳ, ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದರು. ಪೊಲೀಸರು ಕಾಡಿನಲ್ಲಿ ಮುಂದುವರಿಸಿದ ಶೋಧದಲ್ಲಿ ಇಲಿ ಸೆರೆಹಿಡಿಯುವ ಕತ್ತರಿಗೆ ಕಬ್ಬಿಣದ ಪೈಪು ಅಳವಡಿಸಿ ಬಂದೂಕು ರೀತಿಯ ಮತ್ತೊಂದು ಸಲಕರಣೆ ಪತ್ತೆಯಾಗಿದೆ. ಭಾನುವಾರ ತಡ ರಾತ್ರಿ ಬಾಕ್ರಬೈಲಿನಲ್ಲಿರುವ ಇವರ ಮನೆಯ ಸಮೀಪದ ಗುಡ್ಡದಲ್ಲಿ ಬೆಳಕು ಕಾಣುತ್ತಿರುವುದನ್ನು ಗಮನಿಸಿ ಸ್ಥಳೀಯ ನಿವಾಸಿ ಸವಾದ್ ತನ್ನ ಕೆಲವು ಸ್ನೇಹಿತರ ಜತೆ ಅತ್ತ ತೆರಳುತ್ತಿದ್ದ ಸಂದರ್ಭ ಏಕಏಕಿ ಗುಂಡೇಟು ತಗುಲಿ ಗಾಯಗೊಂಡಿದ್ದರು. ಕಾಡುಹಂದಿ ಸೇರಿದಂತೆ ಕಾಡುಪ್ರಾಣಿಗಳನ್ನು ಸೆರೆಹಿಡಿಯಲು ಅಳವಡಿಸಿದ್ದ ಈ ಸಲಕರಣೆಯಿಂದ ಗುಂಡು ಸಿಡಿದಿತ್ತೆನ್ನಲಾಗಿದೆ.




