ಮಂಜೇಶ್ವರ: ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಪ್ರಕಾರ ಮಾದಕ ದ್ರವ್ಯ ಸಾಗಾಟ ಅರೋಪಿ, ಮಂಜೇಶ್ವರ ಬಡಾಜೆ ನಿವಾಸಿ ಸೂರಜ್ ರೈ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಮಾದಕ ದ್ರವ್ಯ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವವರನ್ನು ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಪ್ರಕಾರ ಬಂಧಿಸಿ ಒಂದು ವರ್ಷ ಕಾಲ ಜೈಲಿನಲ್ಲಿರಿಸುವ ರಾಜ್ಯ ಸರ್ಕಾರದ ಆದೇಶದನ್ವಯ ಸೂರಜ್ ರೈಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪೂಜಾಪುರಂ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭಾರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಈತನನ್ನು ಬಂಧಿಸಲಾಗಿದೆ. ಈತನ ವಿರುದ್ದ ಮಂಜೇಶ್ವರ ಠಾಣೆಯಲ್ಲಿ ಎರಡು ಹಾಗೂ ಉಳ್ಳಾಲ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟದ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




