ಕಾಸರಗೋಡು : ಕೇರಳ ಸರ್ಕಾರ ಯಾವುದೇ ಮಾನದಂಡಗಳಿಲ್ಲದೆ ನ್ಯಾಯಾಲಯ ಶುಲ್ಕವನ್ನು ಅನ್ಯಾಯವಾಗಿ ಹೆಚ್ಚಿಸಿರುವುದನ್ನು ವಿರೋಧಿಸಿ ವಕೀಲರು ಹೊಸದುರ್ಗ ನ್ಯಾಯಾಲಯದ ವಠಾರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಭಾರತೀಯ ವಕೀಲರ ಪರಿಷತ್ ರಾಜ್ಯ ಸಮಿತಿಯ ಆಹ್ವಾನದನ್ವಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಕೀಲರ ಪರಿಷತ್ತಿನ ಹೊಸದುರ್ಗ ಘಟಕದ ಆಶ್ರಯದಲ್ಲಿ ನಡೆದ ಧರಣಿಯನ್ನು ವಕೀಲರ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೆ.ಜಿ. ಅನಿಲ್ ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಸಿರುವುದು ಸಾಮಾನ್ಯ ಜನರಿಗೆ ನ್ಯಾಯ ನಿರಾಕರಿಸಿರುವುದಕ್ಕೆ ಸಮಾನವಾಗಿದೆ. ಸಮಾಜದ ಕೆಳಭಾಗದಲ್ಲಿಜನರು ತಮಗೆ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯವನ್ನು ಕೊನೆಯ ಅಸ್ತ್ರವಾಗಿ ನೋಡುತ್ತಾರೆ. ನ್ಯಾಯಾಲಯ ಶುಲ್ಕ ಹೆಚ್ಚಳದಿಂದಾಗಿ ನ್ಯಾಯ ಬಯಸುವ ಸಾಮಾನ್ಯ ಜನರಿಗೆ ಮೊಕದ್ದಮೆಗಳೊಂದಿಗೆ ತಲುಪಲು ಕಷ್ಟವಾಗಿದೆ. ನ್ಯಾಯಾಲಯ ಶುಲ್ಕ ಹೆಚ್ಚಳ ಸರ್ಕಾರದ ಖಜಾನೆ ತುಂಬುವ ಒಂದು ಮಾರ್ಗವಾಗಿದ್ದು, ಇದರ ವಿರುದ್ಧ ಪ್ರಬಲ ಹೋರಟ ನಡೆಸಲಾಗುವುದು ಎಂದು ತಿಳಿಸಿದರು. ಸರ್ಕಾರ ನ್ಯಾಯಾಲಯದ ಶುಲ್ಕ ಹೆಚ್ಚಳಗೊಳಿಸಿದ ಅದೇಶದ ಪ್ರತಿಯನ್ನು ಸುಟ್ಟುಹಾಕುವ ಮೂಲಕ ವಕೀಲರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಘಟಕದ ಅಧ್ಯಕ್ಷ ವಕೀಲ ಎ ಮಣಿಕಂದನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ವಕೀಲರಾದ ಎಂ ರಮೇಶ್, ಕೆ. ಟಿ. ಪ್ರಕಾಶ್ ಉಪಸ್ಥಿತರಿದ್ದರು. ರಾಧಾಕೃಷ್ಣನ್, ಪಿ.ಟಿ. ಮೋಹನ್ ಕುಮಾರ್, ನವೀನ್ ಶಂಕರ್, ಕೃಷ್ಣಪ್ರಿಯ, ಗೋಪಿಕಾ ಮೊದಲಾದವರು ಉಪಸ್ಥಿತರಿದ್ದರು.





