ಕಾಸರಗೋಡು : ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ, ಕನ್ನಡತಿ ಡಿ.ಶಿಲ್ಪಾ ದ್ಯಾವಯ್ಯ ಅವರನ್ನು ಸಿಬಿಐ ತನಿಖಾ ದಳದ ಎಸ್‍ಪಿ ಹುದ್ದೆಗೆ ಪರಿಗಣಿಸಲಾಗಿದೆ. ಜಿಲ್ಲೆಯ ಪೆÇೀಲೀಸ್ ಇಲಾಖೆಯ ಮುಖ್ಯಸ್ಥರಾಗಿ ಜನಪ್ರಿಯತೆ ಪಡೆದಿದ್ದ ಇವರು ಐದು ವರ್ಷಗಳ ಕಾಲ ಡೆಪ್ಯುಟೇಷನ್ ಮೂಲಕ ಸಿಬಿಐ ಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಕುರಿತಾದ ಕೇಂದ್ರ ಗೃಹಖಾತೆಯ ಅನುಮತಿ ಈಗಾಗಲೇ ಲಭಿಸಿದ್ದು, ಬೆಂಗಳೂರು ಕೇಂದ್ರೀಕರಿಸಿ ಡಿ.ಶಿಲ್ಪಾ ಅವರಿಗೆ ನೇಮಕಾತಿ ದೊರೆಯಲಿದೆ. ಕಾಸರಗೋಡಿನಲ್ಲಿ ಹೆಚ್ಚುವರಿ ಎಸ್‍ಪಿಯಾಗಿ ಮೊದಲ ಬಾರಿಗೆ ಕರ್ತವ್ಯ ಆರಂಭಿಸಿರುವ ಶಿಲ್ಪಾ ಅವರು ನಂತರ ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಕೋಟಯಂ, ತಿರುವನಂತಪುರ ರೂರಲ್ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು ಮೂಲತಃ ಬೆಂಗಳೂರು ನಿವಾಸಿಯಾಗಿದ್ದಾರೆ. ಈ ಹಿಂದೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಥಾಮ್ಸನ್ ಜೋಸ್ ಅವರೂ ಡೆಪ್ಯುಟೇಶನ್ ಮೂಲಕ ಸಿಬಿಐ ಬೆಂಗಳೂರು ಕಚೇರಿಯಲ್ಲಿ ಕೆಲಸ ನಿರ್ವಹಿಸಿ, ಪ್ರಸಕ್ತ ಕಣ್ಣೂರು ವಲಯ ಡಿಐಜಿಯಾಗಿ ಕರ್ತವ್ಯದಲ್ಲಿದ್ದಾರೆ.
ಶಿಲ್ಪಾ ಡಿ. ಅವರ ವರ್ಗಾವಣೆಯಿಂದ ತೆರವಾಗಲಿರುವ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಣೆಗಾರಿಕೆಯನ್ನು ಕಣ್ಣೂರು ಹೆಚ್ಚುವರಿ ಎಸ್.ಪಿ ಅನುಜ್ ಪಲಿವಾಲ್ ಅವರಿಗೆ ವಹಿಸಿಕೊಡಲಾಗಿದೆ.





