ಬದಿಯಡ್ಕ: ಕಿಸಾನ್ ಸೇನೆಯ ನೇತೃತ್ವದಲ್ಲಿ ಅಡಿಕೆ ಕೃಷಿಕರ ಸಮಾವೇಶ ಸೋಮವಾರ ಬೆಳಗ್ಗೆ 9 ರಿಂದ ಬದಿಯಡದ ಗುರುಸದನದಲ್ಲಿ ನಡೆಯಲಿದೆ.
ಹವಾಮಾನ ವೈಪರೀತ್ಯದಿಂದಾಗಿ ಕೃಷಿ ವಲಯಕ್ಕೆ ಭಾರೀ ಆಘಾತ ಉಂಟಾಗಿದೆ. ಬೆಳೆ ಕುಸಿತದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಪ್ರತ್ಯೇಕವಾಗಿ ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿಯು ಪ್ರಧಾನ ವಾಣಿಜ್ಯ ಬೆಳೆಯಾಗಿದೆ. ಸಾವಿರಾರು ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿ ತಮ್ಮ ನಿತ್ಯ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಅಡಿಕೆ ಕೃಷಿಗೆ ವಿವಿಧ ತರದ ಮಾರಕ ರೋಗಗಳು ತಗುಲಿ ಅಡಿಕೆ ಬೆಳೆa ಸಾಧಾರಣ ಬೆಳೆಗಿಂತ ಶೇ.80 ರಷ್ಟು ಕುಸಿದಿದ್ದು ಕೃಷಿಕರಿಗೆ ನಿತ್ಯ ಜೀವನ ನಡೆಸಲು ಪರದಾಡುವಂತಾಗಿದೆ. ರೋಗಕ್ಕೆ ಯಾವ ಔಷಧಿ ಸಿಂಪಡಿಸುವುದು ಎಂಬ ಸರಿಯಾದ ಮಾಹಿತಿ ಇಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬ್ಯಾಂಕುಗಳಿಂದ ಪಡೆದ ಕೃಷಿ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿಸಲಾಗದೆ ಏಲಂ ಹಾಗೂ ಜಪ್ತಿಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಸಾನ್ ಸೇನೆಯ ನೇತೃತ್ವದಲ್ಲಿ ಒಂದು ನಿಯೋಗವು ಜಿಲ್ಲಾಧಿಕಾರಿ ಹಾಗೂ ಶಾಸಕರುಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದೆ. ಜಿಲ್ಲಾಧಿಕಾರಿಗಳು ಜಿಲ್ಲಾ ಕೃಷಿ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಕೃಷಿಕರ ಸಭೆಯನ್ನು ಕರೆದು ಈ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ. ಈ ಬಗ್ಗೆ ಮೇ. 5 ರಂದು ಸೋಮವಾರದಂದು ಕಿಸಾನ್ ಸೇನೆಯ ನೇತೃತ್ವದಲ್ಲಿ ಬದಿಯಡ್ಕದ ಗುರುಸದನದಲ್ಲಿ ಕೃಷಿಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸ್ಥಳೀಯ ಶಾಸಕರನ್ನು, ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಜಿಲ್ಲಾ ಕೃಷಿ ಅಧಿಕಾರಿಗಳು, ವಿವಿಧ ಕೃಷಿ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕಿಸಾನ್ ಸೇನೆ ವಿನಂತಿಸಿದೆ.
ಸಭೆಯಲ್ಲಿ ಕಿಸಾನ್ ಸೇನೆಯ ಜಿಲ್ಲಾಧ್ಯಕ್ಷ ಕೆ. ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಕಿಸಾನ್ ಸೇನೆಯ ಮುಖ್ಯ ರಕ್ಷಾಧಿಕಾರಿ ಚಂದ್ರಶೇಖರ ರಾವ್ ಕಲ್ಲಗ ಪ್ರಾಸ್ತಾವಿಕವಾಗಿ ಮಾತನಾಡುವರು. ಉದುಮ ಶಾಸಕ ವಕೀಲ ಸಿ.ಎಚ್. ಕುಂಞಂಬು, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾರಡ್ಕ ಬ್ಲಾ.ಪಂ.ಅಧ್ಯಕ್ಷ ಸಿಜಿ ಮ್ಯಾಥ್ಯೂ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ.ಬಿ., ಕಾರಡ್ಕ ಬ್ಲಾ.ಪಂ.ಸದಸ್ಯ ಕುಂಞಂಬು ನಂಬಿಯಾರ್, ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ಕೃಷಿ ಅಧಿಕಾರಿ ರಾಘವೇಂದ್ರ ಪಿ., ಕಾಸರಗೋಡು ಡಿಡಿಎ ಜ್ಯೋತಿ ಕುಮಾರಿ ಕೆ.ಎನ್, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಮಾಹಿನ್ ಕೇಳೋಟ್, ಎಂ. ಕೃಷ್ಣನ್, ಸಿಪಿಸಿಆರ್.ಐ.ವಿಜ್ಞಾನಿ ಡಾ. ಆರ್.ತಾವ ಪ್ರಕಾಶ್ ಪಾಂಡಿಯನ್, ಡಾ. ಚೈತ್ರ ಎಂ., ಪಿಎಂಎಫ್.ಬಿ.ವೈ ಜಿಲ್ಲಾ ಸಂಯೋಜಕ ಅಜಿತ್ ಕುಮಾರ್, ನಾಸಿರ್ ಚೆರ್ಕಳ, ಜುಲೈಕಾ ಮಾಹಿನ್, ಬಿ ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿರುವರು.




